
ಮೂಡಿಗೆರೆ: ಗ್ರಾಮೀಣ ಪ್ರದೇಶದ ಪ್ರತಿಯೊಂದು ಕುಟುಂಬಕ್ಕೂ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಮೂಡಿಗೆರೆ ತಾಲೂಕಿನ ಬಾಳೂರು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹಾಗೂ ಬಾಳೂರು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ‘ಪೂರ್ಣ ವಿಮಾ ಸುರಕ್ಷತಾ ಗ್ರಾಮ’ ಘೋಷಣೆಗೆ ಸಂಬಂಧಿಸಿದಂತೆ ವಿಶೇಷ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಗ್ರಾಮೀಣ ಜನರು ತಮ್ಮ ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ಅಪಾಯಗಳು, ಅಪಘಾತಗಳು ಹಾಗೂ ಅನಾರೋಗ್ಯದಂತಹ ತುರ್ತು ಸಂದರ್ಭಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ತಡೆಯಲು ವಿಮೆ ಅತ್ಯಂತ ಪ್ರಮುಖ ಸಾಧನವಾಗಿದ್ದು, ಗ್ರಾಮದ ಪ್ರತಿಯೊಬ್ಬ ವ್ಯಕ್ತಿ ಹಾಗೂ ಕುಟುಂಬಕ್ಕೂ ಅಗತ್ಯ ವಿಮಾ ರಕ್ಷಣೆ ತಲುಪಿಸುವ ಉದ್ದೇಶದಿಂದ ‘ಪೂರ್ಣ ವಿಮಾ ಸುರಕ್ಷತಾ ಗ್ರಾಮ’ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಭಿಯಾನದ ಅಂಗವಾಗಿ ಗ್ರಾಮದಲ್ಲಿ ವ್ಯಾಪಕ ವಿಮಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಲಭ್ಯವಿರುವ ವಿವಿಧ ಸರ್ಕಾರಿ ಹಾಗೂ ಖಾಸಗಿ ವಿಮಾ ಯೋಜನೆಗಳು, ಅವುಗಳ ಪ್ರಯೋಜನಗಳು, ಪಾವತಿಸಬೇಕಾದ ಪ್ರೀಮಿಯಂ ಮೊತ್ತ, ಅರ್ಹತೆ ಹಾಗೂ ವಿಮಾ ನಷ್ಟ ಪರಿಹಾರದ ಕುರಿತು ವಲಯ ಮೇಲ್ವಿಚಾರಕರು ಹಾಗೂ ಆರ್ಥಿಕ ಸಾಕ್ಷರತಾ ಸಲಹೆಗಾರರು ಗ್ರಾಮಸ್ಥರಿಗೆ ಸಮಗ್ರ ಮಾಹಿತಿ ನೀಡಿದರು. ಬ್ಯಾಂಕುಗಳು, ಸ್ವಸಹಾಯ ಸಂಘಗಳು ಹಾಗೂ ಸ್ಥಳೀಯ ಆಡಳಿತದ ಸಕ್ರಿಯ ಸಹಕಾರದೊಂದಿಗೆ ಅರ್ಹ ಫಲಾನುಭವಿಗಳನ್ನು ವಿಮಾ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಕರ್ನಾಟಕ ಬ್ಯಾಂಕ್ನ ವ್ಯವಸ್ಥಾಪಕರು ಭಾಗವಹಿಸಿ, ಸ್ವಸಹಾಯ ಸಂಘಗಳ ಮಹಿಳೆಯರಿಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ (PMSBY) ಹಾಗೂ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ (PMJJBY) ಕುರಿತು ವಿವರವಾದ ಮಾಹಿತಿ ನೀಡಿದರು. ಸಣ್ಣ ಪ್ರಮಾಣದ ಪ್ರೀಮಿಯಂ ಪಾವತಿಸುವ ಮೂಲಕ ಕುಟುಂಬಕ್ಕೆ ದೊಡ್ಡ ಮಟ್ಟದ ಆರ್ಥಿಕ ಭದ್ರತೆ ಪಡೆಯಬಹುದು ಎಂದು ಬ್ಯಾಂಕ್ ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿ, ಅರ್ಹರು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಈ ಯಶಸ್ವಿ ಅಭಿಯಾನದಲ್ಲಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ವಲಯ ಮೇಲ್ವಿಚಾರಕರು (ಕೌಶಲ್ಯ), ಆರ್ಥಿಕ ಸಾಕ್ಷರತಾ ಸಲಹೆಗಾರರು, ಎಫ್.ಎಲ್.ಸಿ.ಆರ್.ಪಿ (FLCRP), ಬಿಸಿನೆಸ್ ಕರೆಸ್ಪಾಂಡೆಂಟ್ (BC), ಎಲ್.ಸಿ.ಆರ್.ಪಿ (LCRP), ಕೃಷಿ ಸಖಿ ಹಾಗೂ ಪಶು ಸಖಿ ಸೇರಿದಂತೆ ವಿವಿಧ ವಿಭಾಗಗಳ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅಭಿಯಾನದ ಮೂಲಕ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಬ್ಬ ವ್ಯಕ್ತಿ ಹಾಗೂ ಕುಟುಂಬಕ್ಕೂ ವಿಮಾ ರಕ್ಷಣೆ ತಲುಪಿಸಿ ಶೇ.100ರಷ್ಟು ವಿಮಾ ವ್ಯಾಪ್ತಿಯನ್ನು ಸಾಧಿಸುವ ಗುರಿಯತ್ತ ದಿಟ್ಟ ಹೆಜ್ಜೆ ಇಡಲಾಗಿದೆ.




