
ಮೂಡಿಗೆರೆ: ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿ ಹಾಗೂ ಸರಳ ಸಾಮೂಹಿಕ ವಿವಾಹ ಸಮಿತಿ ವತಿಯಿಂದ ಮೇ 14ರಂದು ಬೆಳಗ್ಗೆ 10 ಗಂಟೆಗೆ ಅಡ್ಯಂತಾಯ ರಂಗಮಂದಿರದಲ್ಲಿ 10 ಜೋಡಿಗಳ ಸರಳ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದ್ದು, ಈ ಕುರಿತು ಮಾಜಿ ಸಚಿವೆ ಹಾಗೂ ಸಮಿತಿ ಅಧ್ಯಕ್ಷೆ ಮೋಟಮ್ಮ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಂಬೇಡ್ಕರ್ ಜಯಂತಿ ಕೇವಲ ಘೋಷಣೆ ಮತ್ತು ಭಾಷಣಗಳಿಗೆ ಸೀಮಿತವಾಗದೆ ಅವರ ಆಶಯವನ್ನು ಜೀವನದಲ್ಲಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಎಲ್ಲಾ ಸಮುದಾಯದ ಬಡ ಕುಟುಂಬಗಳಿಗೆ ಅನುಕೂಲವಾಗುವಂತೆ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದ ಅವರು, ವಿವಾಹಕ್ಕೆ ಅರ್ಜಿ ಸಲ್ಲಿಸಲು ಇಚ್ಛಿಸುವ ವಧೂ ವರರು ತಾಲೂಕು ಕಚೇರಿ ಹಿಂಭಾಗದಲ್ಲಿರುವ ಉದ್ಯೋಗಸ್ತ ಮಹಿಳಾ ವಸತಿ ನಿಲಯದಲ್ಲಿ ಅರ್ಜಿ ಪಡೆದು ಮೇ 5ರೊಳಗೆ ಸಲ್ಲಿಸಬೇಕು ಹಾಗೂ ತಮ್ಮ ವ್ಯಾಪ್ತಿಯ ಪಂಚಾಯಿತಿಯಿಂದ ಕಡ್ಡಾಯವಾಗಿ ಅವಿವಾಹಿತ ದೃಢೀಕರಣ ಪತ್ರವನ್ನು ಜೋಡಿಸಬೇಕು ಎಂದು ಹೇಳಿದರು. ವಿವಾಹವನ್ನು ಕೇವಲ 10 ಜೋಡಿಗಳಿಗೆ ಸೀಮಿತಗೊಳಿಸಿರುವುದರಿಂದ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುತ್ತದೆ ಎಂದರು. ಕಾರ್ಯಕ್ರಮಕ್ಕೆ ಮಂಗಳೂರಿನ ವಿ.ವಿ. ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಸಭಿತಾ ಗುಣ್ಮಿ, ಚಲನಚಿತ್ರ ನಟ ಚೇತನ್ ಮತ್ತು ಗೌರಿಗದ್ದೆ ಆಶ್ರಮದ ಅವದೂತ ವಿನಯ್ ಗುರೂಜಿ ಆಗಮಿಸಲಿದ್ದು, ಸೋಬಾನೆ, ಕೋಲಾಟ, ಜಾನಪದ ನೃತ್ಯ ಸೇರಿದಂತೆ ಮಲೆನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಧೂವರರಿಗೆ ಆಶೀರ್ವಾದ ನೀಡುವ ಮೂಲಕ ಅಂಬೇಡ್ಕರ್ ಆಶಯಕ್ಕೆ ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿದರು. ಗೋಷ್ಠಿಯಲ್ಲಿ ಪ.ಪಂ. ಮಾಜಿ ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಸಮಿತಿ ನಿರ್ದೇಶಕಿ ಸೀತಮ್ಮ ಹಾಗೂ ಕಲಾವಿದ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.




