
ಬೆಂಗಳೂರು: ಭಾರತದಲ್ಲಿ ಮಾರಕ ಡೆಂಗೀ ಜ್ವರಕ್ಕೆ ಬ್ರೇಕ್, ಅಧಿಕೃತವಾಗಿ ನಿರ್ದಿಷ್ಟ ಲಸಿಕೆ ಕ್ಯುಡೆಂಗಾ ಮಾರಾಟಕ್ಕೆ ಅನುಮೋದನೆ ದೊರೆತಿದ್ದು, ಜಪಾನ್ನ ಟಕೇಡಾ ಬಯೋ ಫಾರ್ಮಾಟಿಕಲ್ಸ್ ಅಭಿವೃದ್ಧಿಪಡಿಸಿರುವ ಈ ಲಸಿಕೆಗೆ ಡಿಸಿಜಿಐ (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್) ಸಮ್ಮತಿ ಸೂಚಿಸಿದೆ. ೪ ರಿಂದ ೬೦ ವರ್ಷ ವಯೋಮಾನದವರಿಗೆ ಈ ಲಸಿಕೆ ನೀಡಬಹುದು ಎಂಬ ಸೂಚನೆ ನೀಡಿದ್ದಾರೆ. ಈ ಕ್ಯುಡೆಂಗಾ ಲಸಿಕೆಯು ಡೆಂಗಿಯ ನಾಲ್ಕೂ ವಿಧದ ವೈರಸ್ಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವಂತದ್ದು, ಎರಡು ಡೋಸ್ಗಳಲ್ಲಿ ಈ ಲಸಿಕೆಯನ್ನು ನೀಡಲಾಗುತ್ತದೆ. ಮೊದಲ ಡೋಸ್ ಪಡೆದ ಮೂರು ತಿಂಗಳ ನಂತರವೇ ಎರಡನೇ ಡೋಸ್ ನೀಡಲಾಗುತ್ತದೆ. ಇದು ಸೋಂಕು ಪೀಡಿತರು ಅಥವಾ ಸೋಂಕು ರಹಿತರಾದರೂ ಕೂಡ ಪಡೆಯಬಹುದು. ಈ ಲಸಿಕೆ ಸುಮಾರು ನಾಲ್ಕರಿಂದ ಐದು ವರ್ಷಗಳ ಕಾಲ ರಕ್ಷಣೆ ಮತ್ತು ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ ಎಂದು ಕ್ಲಿನಿಕಲ್ ಪ್ರಯೋಗಗಳು ತೋರಿಸಿವೆ. ಈ ಕ್ಯುಡೆಂಗಾ ಲಸಿಕೆಯ ಉತ್ಪಾದನೆಗಾಗಿ ಹೈದರಾಬಾದ್ ಮೂಲದ ಬಯೋಲಾಜಿಕಲ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ೨೦೨೨ರಿಂದ ಈವರೆಗೆ ೪೩ ದೇಶಗಳಲ್ಲಿ ಈ ಲಸಿಕೆಗೆ ಅನುಮೋದನೆ ಸಿಕ್ಕಿದ್ದು, ವಿಶ್ವದಾದ್ಯಂತ ೩.೨ ಕೋಟಿಗೂ ಹೆಚ್ಚು ಡೋಸ್ಗಳನ್ನು ವಿತರಿಸಲಾಗಿದೆ. ಸೊಳ್ಳೆ ಕಾಟ ಹೆಚ್ಚಿರುವ ಮಳೆಗಾಲದ ಸಂದರ್ಭದಲ್ಲಿ ಭಾರತಕ್ಕೆ ಈ ಲಸಿಕೆ ದೊರೆತಿರುವುದು ನೆಮ್ಮದಿಯ ಸಂಗತಿಯಾಗಿದ್ದು, ಬೂಸ್ಟರ್ ಡೋಸ್ಗಳ ಬಗ್ಗೆ ಸಂಶೋಧನೆಗಳು ಪ್ರಗತಿಯಲ್ಲಿವೆ.




