
ಬೆಂಗಳೂರು: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದ್ದು, ಜಾಮೀನು ಮಂಜೂರು ಮಾಡುವ ವೇಳೆ ವಿಧಿಸಲಾಗಿದ್ದ ನ್ಯಾಯಾಲಯದ ಅನುಮತಿಯಿಲ್ಲದೆ ವ್ಯಾಪ್ತಿ ಬಿಟ್ಟು ತೆರಳಬಾರದು ಎಂಬ ಷರತ್ತನ್ನು ಸಡಿಲಗೊಳಿಸಿ ಆದೇಶಿಸಿದೆ. ಜಾಮೀನು ಷರತ್ತು ಸಡಿಲಿಕೆ ಕೋರಿ ಯಡಿಯೂರಪ್ಪ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವ ಹಿನ್ನೆಲೆಯಲ್ಲಿ ಷರತ್ತು ಸಡಿಲಿಸುವಂತೆ ಅವರ ಪರ ವಕೀಲರು ಮನವಿ ಮಾಡಿದ್ದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳದಂತೆ ವಿಧಿಸಲಾಗಿದ್ದ ಷರತ್ತನ್ನು ಸಡಿಲಿಸಿದ್ದು, ಇದರೊಂದಿಗೆ ಯಡಿಯೂರಪ್ಪ ಅವರು ಯಾವುದೇ ಕಾನೂನಾತ್ಮಕ ಅಡೆತಡೆ ಅಥವಾ ಮುಂಚಿತ ಅನುಮತಿ ಪಡೆಯುವ ಅಗತ್ಯವಿಲ್ಲದೆ ದೇಶಾದ್ಯಂತ ಮುಕ್ತವಾಗಿ ಪ್ರವಾಸ ಕೈಗೊಳ್ಳಲು ಅವಕಾಶ ದೊರೆತಿದೆ. 2024ರ ಫೆಬ್ರವರಿ 2ರಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಬಾಲಕಿಯ ತಾಯಿ ಮಾರ್ಚ್ 14, 2024ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಳೆಯ ಲೈಂಗಿಕ ದೌರ್ಜನ್ಯ ಪ್ರಕರಣವೊಂದಕ್ಕೆ ನ್ಯಾಯ ಒದಗಿಸುವಂತೆ ಕೋರಿ ಬಾಲಕಿ ಮತ್ತು ಆಕೆಯ ತಾಯಿ ಯಡಿಯೂರಪ್ಪ ಅವರನ್ನು ಭೇಟಿಯಾಗಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಸದಾಶಿವನಗರ ಪೊಲೀಸರು ಬಳಿಕ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದ್ದು, ಸಿಐಡಿ ಎಫ್ಐಆರ್ ಮರುದಾಖಲಿಸಿ ಯಡಿಯೂರಪ್ಪ ಸೇರಿದಂತೆ ನಾಲ್ವರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಯಡಿಯೂರಪ್ಪ ಅವರಿಗೆ ಜಾಮೀನು ಮಂಜೂರಾಗಿದ್ದು, ಜಾಮೀನು ಷರತ್ತಿನ ಸಡಿಲಿಕೆ ಕೋರಿ ಸಲ್ಲಿಸಿದ್ದ ಮನವಿಯನ್ನು ಇದೀಗ ಹೈಕೋರ್ಟ್ ಪುರಸ್ಕರಿಸಿದೆ.



