ನವದೆಹಲಿ: ದೇಶದ ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ಅದೃಷ್ಟವಶಾತ್ ತಪ್ಪಿದ ಘಟನೆ ಭಾನುವಾರ ಸಂಜೆ ನಡೆದಿದೆ. ಟರ್ಮಿನಲ್-2 ಪ್ರದೇಶದಲ್ಲಿ ಹಠಾತ್ತನೆ ಬೀಸಿದ ಭಾರೀ ಬಿರುಗಾಳಿ ಹಾಗೂ ಮಳೆಯಿಂದ ಏರ್ ಇಂಡಿಯಾ ಸಂಸ್ಥೆಯ ಮೂರು ವಿಮಾನಗಳು ಜಖಂಗೊಂಡಿದ್ದು, ಹವಾಮಾನ ಇಲಾಖೆಯಿಂದ ಈ ಬಿರುಗಾಳಿಯ ಕುರಿತು ಯಾವುದೇ ಮುನ್ಸೂಚನೆ ಲಭ್ಯವಾಗದ ಹಿನ್ನೆಲೆಯಲ್ಲಿ ಈ ಅನಿರೀಕ್ಷಿತ ಅವಘಡ ಸಂಭವಿಸಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ನಿಲ್ದಾಣದ ಆವರಣದಲ್ಲಿ ನಿಲ್ಲಿಸಲಾಗಿದ್ದ ಗ್ರೌಂಡ್ ಸಪೋರ್ಟ್ ಎಕ್ವಿಪ್ಮೆಂಟ್ಗಳಾದ ಲಗೇಜ್ ಸಾಗಣೆ ಹಾಗೂ ಇತರ ಸೇವಾ ಉಪಕರಣಗಳು ಬಿರುಗಾಳಿಯ ರಭಸಕ್ಕೆ ತಮ್ಮ ಸ್ಥಳದಿಂದ ಕೊಚ್ಚಿಕೊಂಡು ಬಂದು ಪಾರ್ಕ್ ಮಾಡಲಾಗಿದ್ದ ಏರ್ ಇಂಡಿಯಾ ವಿಮಾನಗಳಿಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಮೂರು ವಿಮಾನಗಳಿಗೆ ಹಾನಿಯಾಗಿದೆ. ಈ ಉಪಕರಣಗಳು ಏರ್ ಇಂಡಿಯಾ ಇಂಜಿನಿಯರಿಂಗ್ ಮತ್ತು ಇಂಡಿಗೋ ಸಂಸ್ಥೆಗೆ ಸೇರಿದ್ದವು ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಘಟನೆ ನಡೆದ ಸಂದರ್ಭದಲ್ಲಿ ವಿಮಾನಗಳಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಹಾಗೂ ನೆಲದ ಮೇಲಿದ್ದ ಸಿಬ್ಬಂದಿಗೂ ಯಾವುದೇ ಗಾಯಗಳಾಗಿಲ್ಲ. ಘಟನೆಯ ತಕ್ಷಣವೇ ಹಾನಿಗೊಳಗಾದ ಮೂರೂ ವಿಮಾನಗಳನ್ನು ತಪಾಸಣೆ ಮತ್ತು ದುರಸ್ತಿಗಾಗಿ ತಾತ್ಕಾಲಿಕವಾಗಿ ಸೇವೆಯಿಂದ ಹಿಂಪಡೆಯಲಾಗಿದ್ದು, ಅಧಿಕಾರಿಗಳ ಮಾಹಿತಿ ಪ್ರಕಾರ ಅವುಗಳಲ್ಲಿ ಎರಡು ವಿಮಾನಗಳು ಕೆಲವೇ ದಿನಗಳಲ್ಲಿ ಮತ್ತೆ ಹಾರಾಟಕ್ಕೆ ಸಿದ್ಧವಾಗಲಿವೆ. ಆದರೆ ಮೂರನೇ ವಿಮಾನಕ್ಕೆ ಹೆಚ್ಚು ಹಾನಿಯಾಗಿರುವ ಕಾರಣ ಅದರ ದುರಸ್ತಿ ಕಾರ್ಯಕ್ಕೆ ಹೆಚ್ಚಿನ ಸಮಯ ಬೇಕಾಗುವ ಸಾಧ್ಯತೆ ಇದೆ. ಈ ಘಟನೆ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿದರೂ ಯಾವುದೇ ಪ್ರಾಣಾಪಾಯ ಸಂಭವಿಸದೇ ಭಾರೀ ದುರಂತವೊಂದು ತಪ್ಪಿರುವುದು ಎಲ್ಲರಲ್ಲೂ ಸಮಾಧಾನ ಮೂಡಿಸಿದೆ.
