
ಸರಕಾರದಿಂದ ಸಾಗುವಳಿ ಪತ್ರ ಪಡೆದು, ಸರಕಾರಕ್ಕೆ ನಿಗದಿತ ಕಿಮ್ಮತ್ತು ಪಾವತಿಸಿ, ಪೂರ್ವಜರ ಕಾಲದಿಂದಲೂ ಹಾಗೂ ಸ್ವಾತಂತ್ರ್ಯ ಪೂರ್ವದಿಂದಲೇ ತಮ್ಮ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬಂದಿರುವ ರೈತರ ಭೂಮಿಯನ್ನು ಏಕಾಏಕಿ ಕಡತ ಪೈಫಲ್ಯ ಹೊಂದಿದ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಕೆಲವರ ಹೆಸರನ್ನು ಪಹಣಿಯಿಂದ ವಜಾಗೊಳಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ರೈತ ಪೂರ್ಣೇಶ್ ಕುಂದೂರು ಹೇಳಿದರು. ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಸ್ಯೆ ಪರಿಹರಿಸಲು ರೈತ ಹಿತ ರಕ್ಷಣಾ ವೇದಿಕೆ ಮುಂದೆ ಬಂದಿರುವುದು ರೈತರಿಗೆ ಆಶಾಕಿರಣವಾಗಿದೆ ಎಂದರು. ಇದೇ ವೇಳೆ ಮಾತನಾಡಿದ ಪುಟ್ಟಮ್ಮ ದೇವವೃಂದ, ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಅನೇಕ ಸಣ್ಣ ರೈತರು ಈ ಸಮಸ್ಯೆಗೆ ಸಿಲುಕಿದ್ದು, ಅವರನ್ನು ಭೂಗಳ್ಳರೆಂದು ಬಿಂಬಿಸುವುದು ಖಂಡನೀಯ ಎಂದು ಹೇಳಿದರು. ಭೂಗಳ್ಳರೆಂದು ಆರೋಪಿಸುತ್ತಿರುವವರೂ ಸಹ 50/53ರಡಿ ಭೂಮಿ ಮಾಡಿಕೊಂಡಿದ್ದು, ನಾಳೆ ಅವರ ಭೂಮಿಗೂ ಇದೇ ರೀತಿಯ ಸಮಸ್ಯೆ ಎದುರಾದರೆ ಅವರನ್ನು ಕೂಡ ಭೂಗಳ್ಳರೆಂದು ಕರೆಯುವುದು ಸರಿಯೇ ಎಂದು ಪ್ರಶ್ನಿಸಿದರು. ಡಿ.ಎಸ್. ಬಾಬು ದೇವವೃಂದ ಮಾತನಾಡಿ, ರೈತರು ತಮ್ಮ ಭೂಮಿ ಉಳಿಸಿಕೊಳ್ಳಲು ಒಗ್ಗೂಡಿ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಕೆಲವರು ರೈತರ ಸಮಾವೇಶದಲ್ಲಿ ಹುರುಳಿಲ್ಲದ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಆ ಸಭೆ ರಾಜಕಾರಣಿಗಳನ್ನು ಕೂರಿಸಿ ಕಾಟಾಚಾರಕ್ಕಾಗಿ ನಡೆಸಿದ ಕಾರ್ಯಕ್ರಮವಲ್ಲ, ಶಾಸಕಾಂಗ ಮತ್ತು ಕಾರ್ಯಾಂಗದ ತಪ್ಪುಗಳ ಹಿನ್ನೆಲೆಯಲ್ಲಿ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿರುವ ಅಂಶವನ್ನು ಕಡೆಗಣಿಸಿ ಯಾವುದೇ ಜವಾಬ್ದಾರಿಯುತ ನಾಯಕರು ರೈತ ವಿರೋಧಿ ಹೇಳಿಕೆ ನೀಡಬಾರದು ಎಂದು ಹೇಳಿದರು. ನಮ್ಮ ಭೂಮಿ ನಮ್ಮ ಹಕ್ಕು, ನಾವು ಭೂಗಳ್ಳರಲ್ಲ, ಭೂಮಿಪುತ್ರರು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.





