
ಕೊಟ್ಟಿಗೆಹಾರ: ಮಿಣುಕುಹುಳಗಳು ಪ್ರಾಕೃತಿಕ ಆರೋಗ್ಯದ ಪ್ರಮುಖ ಸೂಚಕಗಳಾಗಿದ್ದು, ಅವು ಕಣ್ಮರೆಯಾಗುತ್ತಿರುವುದು ಒಂದು ಪ್ರದೇಶದ ಪರಿಸರ ವ್ಯವಸ್ಥೆ ಕ್ಷೀಣಿಸುತ್ತಿರುವ ಲಕ್ಷಣ ಎಂದು ಕೀಟ ತಜ್ಞ ಡಾ. ಅವಿನಾಶ್ ಹೇಳಿದರು. ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮತ್ತು ಮಿತ್ರಾ ಎನ್ವಿರಾನ್ಮೆಂಟ್ ಅಂಡ್ ವೈಲ್ಡ್ ಲೈಫ್ ಸೊಸೈಟಿ ಸಹಯೋಗದಲ್ಲಿ ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಆಯೋಜಿಸಿದ್ದ ‘ಕಾಡಿನ ನಕ್ಷತ್ರ-ಮಿಣುಕುಹುಳುಗಳು’ ಕುರಿತ ವಿಚಾರ ಮಂಥನ, ಸಂವಾದ ಹಾಗೂ ಮಿಣುಕುಹುಳುಗಳ ವೀಕ್ಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಿಣುಕುಹುಳಗಳು ಸೂಕ್ಷ್ಮ ಸಂವೇದನೆಯ ಕೀಟಗಳಾಗಿದ್ದು, ಕೃತಕ ಬೆಳಕಿನ ಅತಿಯಾದ ಬಳಕೆ, ಬೆಳಕಿನ ಮಾಲಿನ್ಯ ಹಾಗೂ ಹವಾಮಾನ ವೈಪರೀತ್ಯಗಳಿಂದ ಅವುಗಳ ನೈಸರ್ಗಿಕ ಜೀವನಚಕ್ರ ಅಸ್ತವ್ಯಸ್ತಗೊಳ್ಳುತ್ತಿದೆ ಎಂದು ತಿಳಿಸಿದರು. ಸ್ವಯಂಪ್ರಭೆಯನ್ನು ಹೊರಹೊಮ್ಮಿಸುವ ಅಪರೂಪದ ಜೀವಿಗಳಾದ ಇವುಗಳ ನೈಸರ್ಗಿಕ ಆವಾಸಸ್ಥಾನಗಳು ವೇಗವಾಗಿ ಕಣ್ಮರೆಯಾಗುತ್ತಿದ್ದು, ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಮಾನವ ಹಸ್ತಕ್ಷೇಪವು ಅವುಗಳ ಜನನ ಹಾಗೂ ಬದುಕುಳಿಯುವಿಕೆಗೆ ತೊಡಕಾಗಿದೆ ಎಂದರು. ಮಿಣುಕುಹುಳಗಳ ಸಂಖ್ಯೆ ಜಾಗತಿಕ ಮಟ್ಟದಲ್ಲೂ ಹಾಗೂ ಪಶ್ಚಿಮಘಟ್ಟಗಳಂತಹ ಸೂಕ್ಷ್ಮ ಪರಿಸರ ವಲಯಗಳಲ್ಲೂ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಸಂರಕ್ಷಣೆಗೆ ಪರಿಣಾಮಕಾರಿ ಕಾರ್ಯತಂತ್ರಗಳನ್ನು ರೂಪಿಸುವ ಅಗತ್ಯವಿದೆ. ಆವಾಸಸ್ಥಾನಗಳ ರಕ್ಷಣೆ ಮತ್ತು ಮರುಸ್ಥಾಪನೆಗೆ ಕಾನೂನುಬದ್ಧ ನೀತಿ-ನಿಯಮಗಳನ್ನು ಜಾರಿಗೆ ತರುವುದರ ಜೊತೆಗೆ ಸ್ಥಳೀಯ ಸಮುದಾಯಗಳ ಸಹಭಾಗಿತ್ವ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಕೀಟ ಪ್ರಪಂಚದ ಬಗ್ಗೆ ಅರಿವು ಮೂಡಿಸುವುದು ದೀರ್ಘಕಾಲೀನ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಲೇಖಕ ಹಾಗೂ ಶಿಕ್ಷಕ ಪೂರ್ಣೇಶ್ ಮತ್ತಾವರ, ಮಿಣುಕುಹುಳುಗಳು ಪಶ್ಚಿಮಘಟ್ಟಗಳ ಸ್ವಾಸ್ಥ್ಯದ ಸೂಚಕಗಳಾಗಿದ್ದು, ಅವುಗಳ ಸಂಖ್ಯೆಯ ಕುಸಿತವು ಪಶ್ಚಿಮಘಟ್ಟಗಳ ಪರಿಸರ ಹದಗೆಡುತ್ತಿರುವುದನ್ನು ಸೂಚಿಸುತ್ತದೆ ಎಂದರು. ಜೀವ ವೈವಿಧ್ಯದ ತಾಣವಾಗಿರುವ ಪಶ್ಚಿಮಘಟ್ಟಗಳು ಮಲಿನಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಲೇಖಕರಾದ ಹಳೆಮನೆ ರಾಜಶೇಖರ್, ಶ್ರೀನಿವಾಸ್, ಜಾನುವಾರು ಅಧಿಕಾರಿ ನವೀನ್, ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ ತರುವೆ, ಸುದೀತ್ ಹಾಗೂ ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಉಜಿರೆ, ಚಿಕ್ಕಮಗಳೂರು, ಮೂಡಿಗೆರೆಯಿಂದ ಆಗಮಿಸಿದ ಜ್ಞಾನಾಸಕ್ತರು ಭಾಗವಹಿಸಿದ್ದರು.





