
ನೀವೇ ಸರಿ ಅನ್ನೋ ಜನರ ಮಧ್ಯೆ..
ಅವರು ಗೊಣಗಾಡುತ್ತಲೇ ಇದ್ದರು. ಮಿತ್ರ ಎಂದಕೊಂಡವನೊಬ್ಬ ಇವರ ಕಷ್ಟದಲ್ಲಿ ಸಾಥ್ ನೀಡಲಿಲ್ಲವಂತೆ. ಇದು ಅವರೊಬ್ಬರ ಕತೆಯಲ್ಲ. ನಮ್ಮಲ್ಲಿ ಅನೇಕರಿಗೆ ಇಂಥದ್ದೊಂದು ಅನುಭವವಾಗಿರುತ್ತದೆ. ಒಂದ್ಸಲ ನೆನಪು ಮಾಡಿಕೊಳ್ಳಿ ನಿಮ್ಮ ಬದುಕಿನಲ್ಲಿ ಎಷ್ಟು ಜನ ನೀವು ಮಾಡಿದ ಉಪಕಾರ ಮರ್ತು ಬಿಟ್ಟಿಲ್ಲ! ಅದು ಹಾಳಾಗಿ ಹೋಗಲಿ ಉಪಕಾರ ಪಡೆದು ನಂತರ ನಿಮ್ಮನ್ನೇ ದಿಕ್ಕರಿಸಿದವರು ಎಷ್ಟು ಜನ ಸಿಗಬಹುದು ಅಲ್ವಾ? ಛೇ! ಎಂಥ ಹೃದಯಹೀನ ಮನುಷ್ಯ. ಒಂಚೂರು ಕೃತಜ್ಞತೆ ಇಲ್ಲ.. ಹೀಗೆ ಮಾತಾಡುತ್ತಾ ಅವರಿವರ ಬಳಿ ಹೇಳುತ್ತೇವೆ. ಅವತ್ತು ಅವನಿಗಾಗಿ ಎಷ್ಟೆಲ್ಲಾ ಮಾಡಿದ್ದೇ, ಅವಳಿಗಾಗಿ ಎಷ್ಟು ಹೆಲ್ಪ್ ಮಾಡಿದ್ದೆ. ಈಗ ನನ್ನ ಪರಿಚಯವೇ ಇಲ್ಲದ ರೀತಿ ಇದ್ದಾಳೆ. ಈ ರೀತಿಯ ಕೊರಗು (?) ನಮ್ಮನ್ನು ಕಾಡುತ್ತಿರುತ್ತದೆ. ಎಸ್! ನಾನು ಇವತ್ತು ಹೇಳೋಕೆ ಹೊರಟಿದ್ದೆ ಅದು. ಸುಮ್ನೆ ಗಮನಿಸಿ ನೋಡಿ, ಹೀಗೆ ಗೊಣಗುವವರು ಹೆಜ್ಜೆಗೊಬ್ಬರು ಸಿಗುತ್ತಾರೆ. ಅಂಥವರಲ್ಲಿ ನೀವೂ ಒಬ್ಬರಾ..? ಹಾಗಿದ್ದರೆ ನಾನು ಹೇಳುವುದನ್ನು ಯೋಚಿಸಿ. ನಾನು ಇಲ್ಲಿ ನಿಮ್ಮಿಂದ ಉಪಕಾರ ಪಡೆದು ಮರೆತವರ, ತಿರುಗಿ ಬಿದ್ದವರ, ಒಂದು ರೀತಿಯಲ್ಲಿ ನಿಮ್ಮನ್ನು ಯೂಸ್ ಅಂಡ್ ಥ್ರೋ ರೀತಿ ಬಳಸಿಕೊಂಡವರ ಕುರಿತು ಏನು ಹೇಳುವುದಿಲ್ಲ. ನಾನು ಹೇಳುವುದು ನಿಮ್ಮ ಬಗ್ಗೆ ಅಂದ್ರೆ ಗೊಣಗುತ್ತಿರುವವರ ಬಗ್ಗೆ. ಅದು ನಿಜಕ್ಕೂ ಹರ್ಟ್ ಆಗೋ ಸಂಗತಿಯೇ ಹೌದು. ಎಲ್ಲೋ ಇದ್ದ ಒಬ್ಬನನ್ನು ಕರೆತಂದು ನಾಲ್ಕು ಜನಕ್ಕೆ ಪರಿಚಯ ಮಾಡಿಸಿ ಹೆಜ್ಜೆ ಹೆಜ್ಜೆಗೂ ಪ್ರೋತ್ಸಾಹಿಸಿ ಬೆನ್ನು ತಟ್ಟಿ ಅವನಲ್ಲೊಂದು ಛಲ ಹುಟ್ಟಿಸಿ ಗೆಲ್ಲುವಂತೆ ಮಾಡಿದ್ದೀರಿ. ಆದರೆ ಗೆದ್ದವನ ಸಂಭ್ರಮದಲ್ಲಿ ನಿಮ್ಮೆಡೆಗೊಂದು ಕೃತಜ್ಞತೆಯೇ ಇಲ್ಲ! ಇದು ನಿಮಗೆ ನೋವು ತರಿಸುತ್ತೆ. ಆತ ಕೃತಜ್ಞ ಅಂತ ನೀವು ಕಂಡಕಂಡವರ ಎದುರು ಹೇಳಿಕೊಂಡು ಓಡಾಡುತ್ತೀರಿ. ನಿಮಗೆ ಹಾಗನ್ನಿಸಿದರಲ್ಲಿ ತಪ್ಪಿಲ್ಲದಿರಬಹುದು. ಆದರೆ ನೀವು ಆತನಿಗೆ ಸಹಾಯ ಮಾಡಿದ್ದೀರಿ ಎಂದ ಮಾತ್ರಕ್ಕೆ ಆತ ನಿಮಗೆ ಕೃತಜ್ಞ ಆಗಿರಲೇಬೇಕು ಅಂತ ಬಯಸುವುದರಲ್ಲಿ ಅರ್ಥವಿದೆಯಾ? ಅವನಿಗೆ ಮಾನವೀಯತೆ ಇಲ್ಲ ಅಂತ ನಾವು ಡಂಗುರ ಸಾರುತ್ತಾ ಸಾರುತ್ತಾ ನಮ್ಮ ಮನದ ನೆಮ್ಮದಿಯ ಜೊತೆಗೆ ನೋಡುಗರ ದೃಷ್ಟಿಯಲ್ಲಿ ನಾವು ತೀರಾ ಚಿಕ್ಕವರಾಗಿ ಬಿಡ್ತೀವಿ. ನಮ್ಮಲ್ಲಿ ಇನ್ನೊಂದು ಕೆಟಗರಿ ಜನರಿದ್ದಾರೆ. ಹೆಲ್ಪ್ ಎಷ್ಟು ಬೇಕೋ ಅಷ್ಟು ಪಡೆದುಕೊಂಡು ಬಿಡುತ್ತಾರೆ. ನಿಮ್ಮನ್ನು ಹೇಗೆ ಬೇಕೋ ಹಾಗೆಲ್ಲಾ ಬಳಸಿಕೊಳ್ತಾರೆ, ಈ ಜಗತ್ತಿನಲ್ಲಿ ನಿಮ್ಮನ್ನು ಬಿಟ್ರೆ ಇಲ್ಲ ಅನ್ನೋ ರೀತಿ ಮಾತಾಡ್ತಾರೆ. ಎಲ್ಲಾ ಮುಗಿದ ಮೇಲೆ ನೀವೇ ಸರಿ ಇಲ್ಲ ಅಂತ ಡಿಸೈಡ್ ಮಾಡಿಕೊಂಡು ದೂರಾಗಿ ಬಿಡ್ತಾರೆ. ಹೋದ್ರೆ ಹಾಳಾಗಿ ಹೋಗ್ಲಿ ಅಂತ ನೀವು ಸುಮ್ಮನಾದ್ರು ಊಹುಂ, ಅವರಿಗೆ ನಾಲಿಗೆ ಚಪಲ. ಅವರಿವರ ಬಳಿ ನಿಮ್ಮ ಬಗ್ಗೆ ಕೇವಲವಾಗಿ ಮಾತಾಡುತ್ತಲೇ ಇರುತ್ತಾರೆ. ಇದು ನಿಮ್ಮನ್ನು ಕೊಂಚ ಡಿಸ್ಟ್ರ್ಬ್ ಮಾಡಬಹುದು. ಡೋಂಟ್ ವರಿ ಫ್ರೆಂಡ್. ಅದು ಅವರ ಸ್ವಭಾವವು ಇರಬಹುದು ಅಥವಾ ಬೆಳೆದು ಬಂದ ರೀತಿಯೇ ಹಾಗಿದ್ದರೂ ಇರಬಹುದು. ಸೂಕ್ಷ್ಮವಾಗಿ ಗಮನಿಸಿ ನೋಡಿ ಅವರು ಕೇವಲ ನಿಮ್ಮೊಬ್ಬರ ಬಗ್ಗೆ ಮಾತ್ರ ಹಾಗೆ ಹೇಳಿರುವುದಿಲ್ಲ. ಎಲ್ಲರ ಬಗ್ಗೆಯೂ ಅವರಿಗೆ ಕಂಪ್ಲೆಂಟುಗಳಿರುತ್ತವೆ. ಜಸ್ಟ್ ಇಗ್ನೋರ್ ದೆಮ್.
ನಿಮಗೊಂದು ಸಂಗತಿ ಗೊತ್ತಾ? ನಾವು ಕೆಲವು ಸಲ ಕೇಳದೆ ಸಹಾಯಕ್ಕೆ ಮುಂದಾಗ್ತೀವಿ ಅಲ್ವಾ? ಅದು ನಮ್ಮತನಕ್ಕೆ ನಾವೇ ಕೊಳ್ಳಿ ಇಟ್ಟುಕೊಂಡಂತೆ. ತೀರಾ ಹಟಕ್ಕೆ ಬಿದ್ದು ರಿಸ್ಕ್ ತಗೊಂಡು ಯಾರಿಗಾದ್ರು ಹೆಲ್ಪ್ ಮಾಡೋಕೆ ಮುಂದಾದ್ರೆ ಮಹಾನುಭಾವರು ಯೋಚಿಸೋದು ಏನು ಗೊತ್ತಾ, ಇವರ್ಯಾಕೆ ಮೇಲೆ ಬಿದ್ದು ಉಪಕಾರ ಮಾಡೋಕೆ ಬರ್ತಾರೆ..? ಇವರಿಗೇನು ಲಾಭ ಅಂತ! ಇಂಥಹ ಅನುಭವ ನನಗೂ ಬಹಳಷ್ಟು ಆಗಿದೆ. ಎದುರಿಗೆ ಸಿಕ್ಕರೆ ನಿಮ್ಮ ಪರಿಚಯವೇ ಇಲ್ಲ ಅನ್ನೋ ರೀತಿ, ಶತ್ರು ಎದುರಿಗೆ ಬಂದ ಎನ್ನುವಂತೆ ಚಡಪಡಿಸುವವರು, ತಲೆತಪ್ಪಿಸಿ, ಮುಖ ತಿರುಗಿಸಿ ಹೋಗುವವರು, ನಮ್ಮ ಬಗ್ಗೆಯೇ ಆಡಿಕೊಂಡು ನಗುವವರು ಎಲ್ಲ ವೆರೈಟಿ ಜನಗಳ ನಡುವೆ ನಾವಿದ್ದೇವೆ. ಅಫ್ಕೋರ್ಸ್ ನಂಗೆ ಆ ಬಗ್ಗೆ ಬೇಸರವಿಲ್ಲ. ನನ್ನ ಜೊತೆಗಿದ್ದವರೊಂದಿಗೆ ನಾನು ಸಂತೋಷದಿಂದ ಇದ್ದೇನೆ. ಹಾಗಾಗಿ ನಂಗೆ ಯಾರ ಬಗ್ಗೆಯೂ ಕಂಪ್ಲೇಂಟುಗಳಿಲ್ಲ, ಬದುಕು ಉಪ್ಪಿನ ಕಾಯಿಯಂತೆ ಕೊಂಚ ಖಾರ, ಹುಳಿ, ಉಪ್ಪು! ಜಸ್ಟ್ ಎಂಜಾಯ್.
ಕೊನೆಯದಾಗಿ ಒಂದು ಮಾತು. ಅವನು ಸರಿ ಇಲ್ಲ, ನಂಬಿಕೆ ದ್ರೋಹಿ, ಹೃದಯಹೀನ, ಕೃತಘ್ನ ಅಂತ ಸಮಾಜ ಯಾರನ್ನಾದರು ಹೇಳಿಕೊಳ್ಳಲಿ. ಆದರೆ ನೀವು ಹಾಗಂತ ಯಾರ ಮುಂದೆಯೂ ಅಂಥ ಮಾತಾಡಬೇಡಿ. ಹಾಗಾದರೆ ನೀವು ಮಾಡಿದ ಸಹಾಯಕ್ಕೆ ಬೆಲೆ ಇರುವುದಿಲ್ಲ. ಹೆಲ್ಪಿಂಗ್ ನೇಚರ್ ಅನ್ನೋದು ರಕ್ತಗತವಾಗಿದ್ದರೆ. ಅದು ನಿರಂತರ ಅದಕ್ಕೆ ಯಾರ ಥ್ಯಾಂಕ್ಸ್ ಕೂಡ ಬೇಕಾಗಿಲ್ಲ ಏನಂತೀರಾ…?
