
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಸಾರಥಿಯಾಗಿ ಡಿಕೆ ಶಿವಕುಮಾರ್ ಅಧಿಕೃತವಾಗಿ ಆಯ್ಕೆಯಾಗಲಿದ್ದು, ಮತ್ತೊಂದೆಡೆ ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಪಟ್ಟಾಭಿಷೇಕದ ದಿನಾಂಕವೂ ನಿಗದಿಯಾಗಿದ್ದು, ಬುಧವಾರ ಗೋಧೂಳಿ ಮಹೂರ್ತದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅವರ ಬಹುದೊಡ್ಡ ಕನಸಾಗಿದ್ದ ಮುಖ್ಯಮಂತ್ರಿ ಹುದ್ದೆ ಇದೀಗ ನನಸಾಗುತ್ತಿದ್ದು, ವಿಧಾನಸೌಧದ ಮೆಟ್ಟಿಲುಗಳ ಮೇಲಿನ ಭವ್ಯ ವೇದಿಕೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಜೂನ್ 4 ಅಥವಾ 5ರಂದು ಪದಗ್ರಹಣ ನಡೆಯಲಿದೆ ಎಂಬ ಮಾತುಗಳು ಕೇಳಿಬಂದಿದ್ದರೂ, ಜ್ಯೋತಿಷಿ ಆರಾಧ್ಯ ಅವರ ಸಲಹೆ ಮೇರೆಗೆ ಬುಧವಾರ ಸಂಜೆ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಡಿಕೆ ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಕಾಂಗ್ರೆಸ್ ವರಿಷ್ಠರಾದ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದ್ದು, ಅವರೊಂದಿಗೆ 10 ಮಂದಿ ಸಚಿವರೂ ಸಹ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.




