
ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಸೂಚನೆ ನೀಡಿದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗಳು ಆರಂಭವಾಗಿವೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಯಿಂದ ಪದತ್ಯಾಗ ಮಾಡುವ ನಿರ್ಧಾರ ಕೈಗೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಹಿನ್ನೆಲೆ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಪಟ್ಟಕ್ಕೇರಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಈ ಬೆಳವಣಿಗೆಗಳ ನಡುವೆಯೇ ಇಂದು ಸಿಎಂ ನಿವಾಸ ‘ಕಾವೇರಿ’ಯಲ್ಲಿ ಎಲ್ಲಾ ಸಚಿವರು ಹಾಗೂ ಶಾಸಕರಿಗಾಗಿ ಉಪಾಹಾರ ಕೂಟ ಆಯೋಜಿಸಲಾಗಿತ್ತು. ಈ ವೇಳೆ ಡಿಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಭಾವುಕರಾದ ಘಟನೆ ರಾಜಕೀಯ ವಲಯದ ಗಮನ ಸೆಳೆದಿದೆ. ಉಪಾಹಾರ ಕೂಟಕ್ಕೂ ಮುನ್ನವೇ ಸಿಎಂ ಅವರನ್ನು ಭೇಟಿಯಾದ ಡಿಕೆಶಿ, ಅವರನ್ನು ಅಪ್ಪಿಕೊಂಡು ಭಾವುಕರಾಗಿ ಕಣ್ಣೀರು ಹಾಕಿದ್ದು, ಮುಂದಿನ ರಾಜಕೀಯ ಜೀವನ ಮತ್ತು ಪಕ್ಷದ ಕೆಲಸಗಳಲ್ಲಿ ತಮಗೆ ಮಾರ್ಗದರ್ಶನ ಹಾಗೂ ಸಹಕಾರ ನೀಡಬೇಕೆಂದು ವಿನಂತಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಅವರು ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಇಬ್ಬರು ನಾಯಕರ ನಡುವಿನ ಆತ್ಮೀಯತೆ ಮತ್ತು ಗೌರವದ ಬಾಂಧವ್ಯ ಈ ಘಟನೆಯ ಮೂಲಕ ಸ್ಪಷ್ಟವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಉಪಾಹಾರ ಕೂಟದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಎನ್.ಎಸ್. ಬೋಸರಾಜು, ಡಾ. ಶರಣಪ್ರಕಾಶ್ ಪಾಟೀಲ್, ಎಸ್.ಎಸ್. ಮಲ್ಲಿಕಾರ್ಜುನ್, ಕೆ.ಜೆ. ಜಾರ್ಜ್, ಭೈರತಿ ಸುರೇಶ್, ಡಾ. ಎಂ.ಸಿ. ಸುಧಾಕರ್, ಎನ್. ಚಲುವರಾಯಸ್ವಾಮಿ, ಮಧು ಬಂಗಾರಪ್ಪ, ಶಿವಾನಂದ ಪಾಟೀಲ್, ಕೆ.ಹೆಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ್, ಹೆಚ್.ಕೆ. ಪಾಟೀಲ್, ಡಾ. ಹೆಚ್.ಸಿ. ಮಹದೇವಪ್ಪ, ಶಿವರಾಜ ತಂಗಡಗಿ, ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ಸಚಿವರು ಹಾಗೂ ಶಾಸಕರು ಭಾಗವಹಿಸಿದ್ದರು. ಉಪಾಹಾರ ಕೂಟ ಆರಂಭವಾಗುವ ಮುನ್ನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಮನೆಯೊಳಗಿನ ಪ್ರತ್ಯೇಕ ಕೊಠಡಿಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಒನ್-ಟು-ಒನ್ ಚರ್ಚೆ ನಡೆಸಿದ್ದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇದೇ ವೇಳೆ ಸಿಎಂ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವ ತನಕ ಯಾವುದೇ ರೀತಿಯ ದುಡುಕಿನ ಹೇಳಿಕೆಗಳನ್ನು ನೀಡಬಾರದು ಎಂದು ಡಿಕೆಶಿ ತಮ್ಮ ಬೆಂಬಲಿಗರು ಹಾಗೂ ಶಾಸಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ‘ಹೈಕಮಾಂಡ್ ನಾಯಕರು ಇನ್ನೂ ನನ್ನೊಂದಿಗೆ ನೇರವಾಗಿ ಏನನ್ನೂ ಚರ್ಚಿಸಿಲ್ಲ. ಅಧಿಕಾರ ಹಂಚಿಕೆ ಕುರಿತು ಎಲ್ಲವನ್ನೂ ಸಿಎಂ ಅವರ ಜೊತೆಯಲ್ಲೇ ಮಾತನಾಡಿದ್ದಾರೆ. ಸಿಎಂ ರಾಜೀನಾಮೆ ವಿಚಾರದಲ್ಲಿ ನನಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ’ ಎಂದು ಡಿಕೆಶಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಹೈವೋಲ್ಟೇಜ್ ರಾಜಕೀಯ ಬೆಳವಣಿಗೆಗಳ ನಡುವೆಯೇ ನಡೆದ ಈ ಉಪಾಹಾರ ಕೂಟ ಹಲವು ಅಪರೂಪದ ಹಾಗೂ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ.




