
ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ನಡೆಯುತ್ತಿದ್ದ ಎಲ್ಲಾ ಚರ್ಚೆಗಳಿಗೆ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಎಲ್ಲಾ ಸಚಿವರು ಹಾಗೂ ಶಾಸಕರಿಗಾಗಿ ಬ್ರೇಕ್ಫಾಸ್ಟ್ ಮೀಟಿಂಗ್ ಆಯೋಜಿಸಿದ್ದ ಸಿದ್ದರಾಮಯ್ಯ, ಸಭೆಯಲ್ಲೇ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ. ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಬಹುತೇಕ ಎಲ್ಲಾ ಸಚಿವರು ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, “ನಾನು ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪರಮೇಶ್ವರ್ ಆಗಲಿ, ಡಿಕೆ ಶಿವಕುಮಾರ್ ಆಗಲಿ ಯಾರೇ ಮುಖ್ಯಮಂತ್ರಿ ಆದರೂ ಅವರಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ” ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಮಧ್ಯಾಹ್ನ 3 ಗಂಟೆಗೆ ಲೋಕಭವನಕ್ಕೆ ತೆರಳಿ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಲಿರುವುದಾಗಿ ಕೂಡ ತಿಳಿಸಿದ್ದಾರೆ. ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ, ಪಕ್ಷದ ಏಕತೆಯ ಸಂದೇಶ ನೀಡಲು ಪ್ರಯತ್ನಿಸಿದರು ಎಂದು ಹೇಳಲಾಗುತ್ತಿದೆ. ಇತ್ತ ಉಪಾಹಾರ ಕೂಟಕ್ಕೂ ಮುನ್ನ ಸಿಎಂ ಅವರನ್ನು ಭೇಟಿಯಾದ ಡಿಕೆ ಶಿವಕುಮಾರ್ ಭಾವುಕರಾಗಿದ್ದು, ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಇಬ್ಬರು ನಾಯಕರ ನಡುವಿನ ಮಾನವೀಯ ಬಾಂಧವ್ಯ ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಬಳಿಕ ಡಿಕೆಶಿ ಅವರು ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡು, ಮುಂದಿನ ರಾಜಕೀಯ ಜೀವನ ಹಾಗೂ ಪಕ್ಷದ ಕಾರ್ಯಗಳಲ್ಲಿ ಮಾರ್ಗದರ್ಶನ ಮತ್ತು ಸಹಕಾರ ನೀಡುವಂತೆ ವಿನಂತಿಸಿಕೊಂಡಿದ್ದಾರೆ. ಈ ಘಟನೆಗಳು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ನಾಯಕತ್ವ ಬದಲಾವಣೆಯ ಬೆಳವಣಿಗೆಗಳು ತೀವ್ರ ಕುತೂಹಲ ಮೂಡಿಸಿವೆ.




