
ಕಾಲೇಜು ದಿನಗಳ ಅಂಕಗಳು ಕಡಿಮೆ ಬಂದಿದ್ದ ಕಾರಣಕ್ಕೆ 8 ವರ್ಷದ ಅನುಭವ ಹೊಂದಿದ್ದ Google ಉದ್ಯೋಗಿಯೊಬ್ಬರ ಅರ್ಜಿಯನ್ನು ಭಾರತೀಯ ಸ್ಟಾರ್ಟ್ಅಪ್ ಕಂಪನಿಯೊಂದು ತಿರಸ್ಕರಿಸಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವರ್ಷಕ್ಕೆ ಸುಮಾರು 80 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿರುವ ಈ ಟೆಕ್ಕಿ, ಉದ್ಯೋಗ ಬದಲಾವಣೆಯ ಉದ್ದೇಶದಿಂದ ಭಾರತದ ಉದಯೋನ್ಮುಖ ಸ್ಟಾರ್ಟ್ಅಪ್ ಕಂಪನಿಯೊಂದಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕಂಪನಿಯು ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ, ಅವರ ಕಾಲೇಜು ದಿನಗಳ CGPA 7ಕ್ಕಿಂತ ಕಡಿಮೆ ಇರುವ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸಿರುವುದಾಗಿ ತಿಳಿಸಿದೆ. ಸಾಮಾನ್ಯವಾಗಿ ಹೊಸದಾಗಿ ಕಾಲೇಜು ಮುಗಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ಗ್ರೇಡ್ಗಳನ್ನು ಪರಿಶೀಲಿಸುವುದು ಸಾಮಾನ್ಯವಾದರೂ, ಐಟಿ ಕ್ಷೇತ್ರದಲ್ಲಿ ಎಂಟು ವರ್ಷಗಳ ಅನುಭವ ಹೊಂದಿರುವ ವ್ಯಕ್ತಿಯ ಅರ್ಜಿಯನ್ನು ಹಳೆಯ ಕಾಲೇಜು ಅಂಕಗಳ ಆಧಾರದ ಮೇಲೆ ತಿರಸ್ಕರಿಸಿರುವುದು ಅಚ್ಚರಿಗೆ ಕಾರಣವಾಗಿದೆ. ವಿಶೇಷವೆಂದರೆ, ಸದರಿ ಗೂಗಲ್ ಉದ್ಯೋಗಿ ತಮ್ಮ ಬಯೋಡೇಟಾದಲ್ಲೇ ಕಾಲೇಜು ಅಂಕಗಳನ್ನು ಉಲ್ಲೇಖಿಸಿರಲಿಲ್ಲ. ಆದರೂ ಕಂಪನಿ ಹಳೆಯ ಅಂಕಗಳನ್ನು ಪತ್ತೆಹಚ್ಚಿ ಅದರ ಆಧಾರದ ಮೇಲೆ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಕಂಪನಿ ಕಳುಹಿಸಿದ ಸಂದೇಶದಲ್ಲಿ CGPA ಕಡಿಮೆ ಇರುವುದನ್ನು ಬಿಟ್ಟರೆ, ಅವರ ಕೌಶಲ್ಯ, ಅನುಭವ ಅಥವಾ ಕೆಲಸದ ಸಾಮರ್ಥ್ಯದ ಬಗ್ಗೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ಈ ಅನುಭವವನ್ನು ಆ ಉದ್ಯೋಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ತಕ್ಷಣವೇ ವಿಷಯ ವೈರಲ್ ಆಗಿದ್ದು, ಸ್ಟಾರ್ಟ್ಅಪ್ ಕಂಪನಿಯ ಕ್ರಮಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಎಂಟು ವರ್ಷಗಳ ನೈಜ ಅನುಭವ ಹೊಂದಿರುವ ವ್ಯಕ್ತಿಯ ಸಾಮರ್ಥ್ಯವನ್ನು ಅಳೆಯಲು ಕಾಲೇಜು ಅಂಕಗಳನ್ನು ಮಾನದಂಡವಾಗಿಡುವುದು ತರ್ಕಹೀನ”, “ಇಂತಹ ಸಣ್ಣ ಮನಸ್ಥಿತಿಯ ಕಂಪನಿಗೆ ಸೇರದೇ ಇರುವುದೇ ಉತ್ತಮ” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಈ ಘಟನೆ ನೇಮಕಾತಿ ಪ್ರಕ್ರಿಯೆಯಲ್ಲಿ ಅನುಭವಕ್ಕಿಂತ CGPAಗೆ ಹೆಚ್ಚಿನ ಮಹತ್ವ ನೀಡಬೇಕೇ ಎಂಬ ಹೊಸ ಚರ್ಚೆಗೆ ಕಾರಣವಾಗಿದೆ.




