
ಕೊಟ್ಟಿಗೆಹಾರ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಎಸ್ಸೀ ಮೋರ್ಚ ವತಿಯಿಂದ ಮೇ.29ರಂದು ಮಧ್ಯಾಹ್ನ 2 ಗಂಟೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ತಿಳಿಸಿದರು. ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಸಿದ್ಧಾಂತ, ಆದರ್ಶ ಹಾಗೂ ಜೀವನ ಚರಿತ್ರೆಯನ್ನು ಯುವ ಜನತೆಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಂಬೇಡ್ಕರ್ ಅವರ ಜನ್ಮಸ್ಥಳ ಸೇರಿದಂತೆ ಐದು ಪ್ರಮುಖ ಸ್ಥಳಗಳನ್ನು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದ ಅವರು, ಅಂಬೇಡ್ಕರ್ ರಚಿಸಿದ ಭಾರತೀಯ ಸಂವಿಧಾನವನ್ನು ಇಡೀ ವಿಶ್ವವೇ ಕೊಂಡಾಡುತ್ತಿದ್ದು, ಇದೇ ಕಾರಣಕ್ಕೆ ಏ.14ರಂದು ವಿಶ್ವ ಜ್ಞಾನದ ದಿನವೆಂದು ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲಾ ಸಮುದಾಯದ ಜನರಿಗೆ ಅಂಬೇಡ್ಕರ್ ಅವರ ಆಶಯ ಹಾಗೂ ಚಿಂತನೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಬಿಜೆಪಿ ಎಸ್ಸೀ ಮೋರ್ಚದ ಅಧ್ಯಕ್ಷ ಸಚಿನ್ ಬಾನಳ್ಳಿ ಮಾತನಾಡಿ, ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಹಾಗೂ ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಅವರು ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಸೇರಿದಂತೆ ಪಕ್ಷದ ವಿವಿಧ ಮೋರ್ಚಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ತಾಲೂಕು ಎಸ್ಸೀ ಮೋರ್ಚ ಉಪಾಧ್ಯಕ್ಷ ಶರತ್ ಮಾಕೋನಹಳ್ಳಿ, ಬಾಳೂರು ಹೋಬಳಿ ಅಧ್ಯಕ್ಷ ರಘುಪತಿ ಹಾಗೂ ನಗರ ಕಾರ್ಯದರ್ಶಿ ರಘು ಮೂಡಿಗೆರೆ ಉಪಸ್ಥಿತರಿದ್ದರು.




