ಕರ್ನಾಟಕದ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ರಾಮನಗರ ಜಿಲ್ಲೆಯ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ನೀರಿನ ಅಗತ್ಯವನ್ನು ಪೂರೈಸುವ ಪ್ರಮುಖ ಯೋಜನೆಯಾಗಿ ಇದನ್ನು ಪರಿಗಣಿಸಲಾಗಿದೆ. ಸುಮಾರು 67 ಟಿಎಂಸಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಈ ಜಲಾಶಯ ಯೋಜನೆಗೆ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ತಮಗೆ ಲಭಿಸುವ ಕಾವೇರಿ ನೀರಿನ ಪ್ರಮಾಣ ಕಡಿಮೆಯಾಗಬಹುದು ಎಂಬ ಆತಂಕದಿಂದ ಕಾನೂನು ಹೋರಾಟ ಆರಂಭಿಸಿದೆ. ಇದೇ ವಿಚಾರವಾಗಿ ತಮಿಳುನಾಡು ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠ ವಜಾಗೊಳಿಸಿದ್ದು, ಇದರಿಂದ ಕರ್ನಾಟಕಕ್ಕೆ ಮಹತ್ವದ ಹಿನ್ನಲೆ ದೊರೆತಂತಾಗಿದೆ. ಆದರೆ ತಮಿಳು ಜನರ ಭಾವನಾತ್ಮಕ ವಿಷಯವಾಗಿರುವ ನೀರಿನ ಹಂಚಿಕೆ ವಿಚಾರವನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಗಂಭೀರವಾಗಿ ಕೈಗೆತ್ತಿಕೊಂಡಿದ್ದು, ತಮ್ಮ ಆಡಳಿತದ ಆರಂಭಿಕ ದಿನಗಳಿಂದಲೇ ಮೇಕೆದಾಟು ಯೋಜನೆಗೆ ತಗಾದೆ ಮುಂದುವರಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕದ ಪರವಾಗಿ ನಿಂತು, ಈ ಹಿಂದಿನ ಆದೇಶವನ್ನು ಸ್ಪಷ್ಟಪಡಿಸಿದ್ದು, ತಮಿಳುನಾಡಿಗೆ ನಿಗದಿಪಡಿಸಿದ 177 ಟಿಎಂಸಿ ನೀರನ್ನು ಹರಿಸಿದ ಬಳಿಕ ಉಳಿದ ನೀರಿನ ಬಳಕೆಯನ್ನು ರಾಜ್ಯದ ವಿವೇಚನೆಗೆ ಬಿಟ್ಟಿದೆ. ಆದರೂ ಮೇಕೆದಾಟು ಅಣೆಕಟ್ಟಿನಿಂದ ತಮಿಳುನಾಡಿಗೆ ಹರಿಯುವ ಕಾವೇರಿ ನೀರಿನ ಪ್ರಮಾಣ ಕಡಿಮೆಯಾಗಬಹುದು ಎಂಬ ವಾದವನ್ನು ತಮಿಳುನಾಡು ಮುಂದಿಟ್ಟಿದೆ. ಕಾವೇರಿ ಜಲವಿವಾದ ನ್ಯಾಯಾಧೀಕರಣ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕೆಳಭಾಗದ ರಾಜ್ಯದ ಒಪ್ಪಿಗೆಯಿಲ್ಲದೆ ಮೇಲ್ಭಾಗದಲ್ಲಿ ಯಾವುದೇ ಯೋಜನೆ ಕೈಗೊಳ್ಳಬಾರದು ಎಂಬುದು ತಮಿಳುನಾಡಿನ ನಿಲುವಾಗಿದೆ. ಆದರೆ ಮಳೆಗಾಲದಲ್ಲಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳು ಭರ್ತಿಯಾಗಿ ಅಪಾರ ಪ್ರಮಾಣದ ಹೆಚ್ಚುವರಿ ನೀರು ತಮಿಳುನಾಡಿನ ಮೂಲಕ ಸಮುದ್ರ ಸೇರುತ್ತಿದ್ದು, ಆ ಹೆಚ್ಚುವರಿ ನೀರನ್ನು ಮಾತ್ರ ಮೇಕೆದಾಟುವಿನಲ್ಲಿ ಸಂಗ್ರಹಿಸಲಾಗುತ್ತದೆ ಎಂಬುದು ಕರ್ನಾಟಕದ ವಾದವಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಬಿಡಬೇಕಾದ ನೀರಿನ ಪಾಲನ್ನು ಸಂಪೂರ್ಣವಾಗಿ ನೀಡಿದ ಬಳಿಕ ಉಳಿಯುವ ನೀರನ್ನೇ ಸಂಗ್ರಹಿಸಲಾಗುತ್ತದೆ, ಇದರಿಂದ ತಮಿಳುನಾಡಿಗೆ ಯಾವುದೇ ನಷ್ಟವಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಇದು ಸಂಪೂರ್ಣವಾಗಿ ಕುಡಿಯುವ ನೀರಿನ ಯೋಜನೆಯಾಗಿದ್ದು, ರಾಷ್ಟ್ರೀಯ ಜಲ ನೀತಿಯ ಪ್ರಕಾರ ಕುಡಿಯುವ ನೀರಿನ ಯೋಜನೆಗಳಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಅಂಶವನ್ನೂ ಕರ್ನಾಟಕ ಮುಂದಿಟ್ಟಿದೆ. ಈ ನಡುವೆ ರಾಜ್ಯ ಸರ್ಕಾರ ಪರಿಷ್ಕೃತ ಡಿಪಿಆರ್ ಸಲ್ಲಿಕೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದು, ತಮಿಳುನಾಡಿನ ವಿರೋಧಕ್ಕೆ ಕಾನೂನು ಹೋರಾಟವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಮೂಲಕ ಉತ್ತರ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ.
