
ಮೂಡಿಗೆರೆ: ಪಟ್ಟಣದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 173 ಹಾಗೂ 73ರ ರಸ್ತೆ ಬದಿಗಳಲ್ಲಿ ಕಸದ ರಾಶಿಗಳು ಹೆಚ್ಚಾಗಿದ್ದು, ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಆರೋಪಿಸಿರುವ ವಿಶ್ವ ಹಿಂದೂ ಪರಿಷತ್ ಮುಖಂಡರು, ರಸ್ತೆ ಬದಿಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ತಹಸೀಲ್ದಾರ್ ಎಸ್. ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು. ಹೆಸಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲಿಬೈಲು ಸರ್ಕಲ್, ಹಳೆಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹ್ಯಾಂಡ್ಪೋಸ್ಟ್ ಸರ್ಕಲ್, ಕೃಷ್ಣಾಪುರ, ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಹಳ್ಳಿ ಸೇರಿದಂತೆ ಹಲವು ಸ್ಥಳಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಕಸ ಹಾಕಲಾಗುತ್ತಿದ್ದು, ಇದರಿಂದ ಉಂಟಾಗುತ್ತಿರುವ ದುರ್ವಾಸನೆಯಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು. ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದ್ದು, ಶೀಘ್ರದಲ್ಲೇ ಮಳೆಗಾಲ ಆರಂಭವಾಗಲಿರುವುದರಿಂದ ತ್ಯಾಜ್ಯ ಪರಿಸರ ಹಾನಿಗೆ ಕಾರಣವಾಗುವ ಜೊತೆಗೆ ಹಳ್ಳ, ಕೊಳ್ಳ ಹಾಗೂ ನದಿಗಳಿಗೆ ಸೇರಿ ನೀರು ಕಲುಷಿತಗೊಳ್ಳುವ ಸಾಧ್ಯತೆಯೂ ಇದೆ ಎಂದು ಎಚ್ಚರಿಸಿದರು. ಮೇ ತಿಂಗಳ ಅಂತ್ಯದೊಳಗೆ ರಸ್ತೆ ಬದಿಯಲ್ಲಿರುವ ಎಲ್ಲಾ ಕಸವನ್ನು ತೆರವುಗೊಳಿಸಿ, ಅಕ್ರಮವಾಗಿ ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಚೇರಿಗಳ ಆವರಣದಲ್ಲಿ ಕಸ ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ವೇಳೆ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಸುದೇವ್ ಗುತ್ತಿ, ಉಪಾಧ್ಯಕ್ಷ ಅಭಿಲಾಷ್ ಉಗ್ಗೇಹಳ್ಳಿ, ಕಾರ್ಯದರ್ಶಿ ಪ್ರಶಾಂತ್ ಹಂಡುಗುಳಿ, ಬಜರಂಗದಳ ತಾಲೂಕು ಸಂಯೋಜಕ ಸಂತೋಷ್, ರಾಘವೇಂದ್ರ, ಜನ್ನಾಪುರ, ಯತೀಶ್ ಮೂಡಿಗೆರೆ ಹಾಗೂ ನಾಗೇಶ್ ಮೇಗಲಪೇಟೆ ಉಪಸ್ಥಿತರಿದ್ದರು.




