
ಚಿಕ್ಕಮಗಳೂರು: ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಮತ್ತು ಜನಪರ ಸೇವೆಯಿಂದ ಪೊಲೀಸ್ ಇಲಾಖೆಯಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದ ಶೃಂಗೇರಿ ಮೂಲದ ನಿವೃತ್ತ ಎಸಿಪಿ ಕೆ.ಎನ್. ರಮೇಶ್ ಅವರು ವಿಧಿವಶರಾಗಿದ್ದು, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ‘ಕಾರ್ಗಿಲ್ ರಮೇಶ್’ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದ ಅವರು ಸುಮಾರು 30 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ರಮೇಶ್ ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದವರಾಗಿದ್ದು, ಶೃಂಗೇರಿ ಹಾಗೂ ದಾವಣಗೆರೆಯಲ್ಲಿ ಶಿಕ್ಷಣ ಮುಗಿಸಿ ಕೆಲಕಾಲ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಂತರ ಪೊಲೀಸ್ ಇಲಾಖೆಗೆ ಸೇರ್ಪಡೆಯಾದರು. . 1994ರ ಸಬ್ ಇನ್ಸ್ಪೆಕ್ಟರ್ ಬ್ಯಾಚ್ ಅಧಿಕಾರಿಯಾಗಿ ಕೋಲಾರ ರೂರಲ್ ಠಾಣೆಯಲ್ಲಿ ಸೇವೆ ಆರಂಭಿಸಿದ ಅವರು, ಬೇರೆಡೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಲೋಕಾಯುಕ್ತ ಹಾಗೂ ಗುಪ್ತಚರ ಇಲಾಖೆಯಲ್ಲಿಯೂ ಸೇವೆ ಸಲ್ಲಿಸಿದ್ದ ಅವರು, ಚನ್ನಪಟ್ಟಣ ಡಿವೈಎಸ್ಪಿಯಾಗಿ ನಿವೃತ್ತಿ ಹೊಂದಿದ್ದರು. ಸರಳ ವ್ಯಕ್ತಿತ್ವ, ಕಠಿಣ ಕರ್ತವ್ಯಪಾಲನೆ ಹಾಗೂ ಸಮಾಜಮುಖಿ ಚಿಂತನೆಯ ಮೂಲಕ ಅನೇಕರಿಗೆ ಪ್ರೇರಣೆಯಾಗಿದ್ದ ಕೆ.ಎನ್. ರಮೇಶ್ ಅವರ ಅಗಲಿಕೆ ಪೊಲೀಸ್ ಇಲಾಖೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.




