
ಬೆಂಗಳೂರು: ಕರ್ನಾಟಕದಲ್ಲಿ KSRTC, BMTC ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಮೇ 20 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ನೌಕರರ ನಡುವೆ ಸಂಘರ್ಷ ತೀವ್ರಗೊಂಡಿದ್ದು, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸರ್ಕಾರ ನೀಡಿದ ಆದೇಶವನ್ನು ಕರ್ನಾಟಕ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ತಿರಸ್ಕರಿಸಿರುವುದರಿಂದ ಮಾತುಕತೆ ವಿಫಲವಾಗಿದೆ. ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಪರಿಸ್ಥಿತಿ ಎದುರಿಸಲು ಸರ್ಕಾರವೂ ಬಿಗ್ ಪ್ಲಾನ್ ರೂಪಿಸುತ್ತಿದ್ದು, ಸರ್ಕಾರಿ ಬಸ್ ಬದಲಾಗಿ ಖಾಸಗಿ ಬಸ್ಗಳ ಕಾರ್ಯಾಚರಣೆ ನಡೆಸಲು 2000ಕ್ಕೂ ಹೆಚ್ಚು ಖಾಸಗಿ ಬಸ್ಗಳನ್ನು ಬಳಕೆ ಮಾಡುವ ಕುರಿತು ಮಾಲೀಕರ ಜೊತೆ ಚರ್ಚೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ, ಜೊತೆಗೆ ಶಕ್ತಿ ಯೋಜನೆಯ ನಂತರ ಸೇವೆಯಿಂದ ದೂರವಿದ್ದ ಖಾಸಗಿ ಬಸ್ಗಳನ್ನು ಮತ್ತೆ ರಸ್ತೆಗಿಳಿಸುವ ಸಾಧ್ಯತೆಗಳೂ ಪರಿಗಣನೆಯಲ್ಲಿವೆ ಎಂದು ಹೇಳಲಾಗಿದೆ. ಇದಲ್ಲದೆ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸಾರಿಗೆ ನಿಗಮದ ಚಾಲಕರು ಮತ್ತು ಸಿಬ್ಬಂದಿಯನ್ನು ಬಳಸಿ ತಾತ್ಕಾಲಿಕವಾಗಿ ಬಸ್ ಸಂಚಾರ ಮುಂದುವರಿಸಲು ಸರ್ಕಾರ ತಯಾರಿ ನಡೆಸುತ್ತಿದೆ ಎನ್ನಲಾಗುತ್ತಿದ್ದು, ನೌಕರರು ಕೆಲಸಕ್ಕೆ ಹಾಜರಾಗದೇ ಮುಷ್ಕರ ಹೂಡಿದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ತೀವ್ರ ತೊಂದರೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ರೂಪಿಸಲಾಗುತ್ತಿದೆ. ಸರ್ಕಾರವು ಶೇ 12.5 ರಷ್ಟು ವೇತನ ಹೆಚ್ಚಳ ಮಾತ್ರ ಸಾಧ್ಯವೆಂದು ಸ್ಪಷ್ಟಪಡಿಸಿದ್ದು, ನೌಕರರ ಸಂಘಟನೆಗಳು ಇದನ್ನು ಒಪ್ಪದೇ ಹೋರಾಟ ಮುಂದುವರೆಸಿರುವುದರಿಂದ ರಾಜ್ಯದಲ್ಲಿ ಸಾರಿಗೆ ಸೇವೆ ಸ್ಥಗಿತದ ಆತಂಕದ ನಡುವೆ ಸರ್ಕಾರ–ನೌಕರರ ನಡುವಿನ ಸಮರ ಮುಂದುವರಿದಿದೆ.




