
ಬೆಂಗಳೂರು : ತಾಯಿ ಆಸ್ತಿ ಬೇಕು ಆದರೆ ಆಕೆ ಬೇಡ ಎಂಬ ಮಗಳ ನಡೆಗೆ ಸಂಬಂಧಿಸಿದ ಮಹತ್ವದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಕಠಿಣ ನಿಲುವು ತಾಳಿದ್ದು, ಹಿರಿಯ ನಾಗರಿಕ ನಿರ್ವಹಣಾ ನ್ಯಾಯಮಂಡಳಿ ಮತ್ತು ಉಪವಿಭಾಗಾಧಿಕಾರಿಗಳು ಗಿಫ್ಟ್ ಡೀಡ್ ರದ್ದುಗೊಳಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ. ಪ್ರಕರಣದಲ್ಲಿ ಪವಿತ್ರಾ ಎಂಬ ಮಹಿಳೆ ತನ್ನ ತಾಯಿ ಹೇಮಾ ನೀಡಿದ್ದ ಆಸ್ತಿಯನ್ನು ಗಿಫ್ಟ್ ಡೀಡ್ ಮೂಲಕ ಪಡೆದ ಬಳಿಕ, ತಾಯಿಗೆ ಮಾನಸಿಕ ಕಿರುಕುಳ ನೀಡಲಾಗಿದೆ ಹಾಗೂ ಮೂಲಭೂತ ಅಗತ್ಯಗಳನ್ನು ಪೂರೈಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ಕಾಯ್ದೆ 2007ರ ಸೆಕ್ಷನ್ 23(1) ಅಡಿಯಲ್ಲಿ ಟ್ರಿಬ್ಯೂನಲ್ ಆಸ್ತಿಯನ್ನು ಮರುಹಸ್ತಾಂತರಿಸುವಂತೆ ಆದೇಶಿಸಿತ್ತು, ಇದನ್ನು ಉಪಆಯುಕ್ತರೂ ಅನುಮೋದಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಪವಿತ್ರಾ ಹೈಕೋರ್ಟ್ ಮೆಟ್ಟಿಲೇರಿದರೂ, ನ್ಯಾಯಮೂರ್ತಿ ಸಚಿನ್ ಎಸ್. ಮಗದುಮ್ ಅವರ ಪೀಠ ಅರ್ಜಿಯನ್ನು ವಜಾಗೊಳಿಸಿದ್ದು, ಗಿಫ್ಟ್ ಡೀಡ್ನಲ್ಲಿ ಪಾಲನೆ ಷರತ್ತು ಸ್ಪಷ್ಟವಾಗಿ ಇರಬೇಕೆಂಬ ಅಗತ್ಯವಿಲ್ಲ, ಪರಿಸ್ಥಿತಿ ಮತ್ತು ನಡೆನುಡಿಗಳಿಂದಲೇ ಅದನ್ನು ಅರ್ಥಮಾಡಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ. ನ್ಯಾಯಾಲಯವು ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ಕಾಯ್ದೆ ಒಂದು ಕಲ್ಯಾಣಮುಖಿ ಕಾನೂನು ಆಗಿದ್ದು, ಕೇವಲ ಲಿಖಿತ ಷರತ್ತುಗಳ ಆಧಾರದಲ್ಲಿ ಅದರ ಉದ್ದೇಶವನ್ನು ಸೀಮಿತಗೊಳಿಸಲಾಗುವುದಿಲ್ಲ ಎಂದು ಹೇಳಿದೆ. ಪ್ರಕರಣದ ಪ್ರಕಾರ, ಹೇಮಾ ತಮ್ಮ ಆಸ್ತಿಯನ್ನು ಮಕ್ಕಳ ಮೇಲಿನ ನಂಬಿಕೆ ಮತ್ತು ಭದ್ರತೆಯ ನಿರೀಕ್ಷೆಯಿಂದ ವರ್ಗಾಯಿಸಿದ್ದರೂ, ನಂತರ ಅವರು ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿ ತಮ್ಮ ಆಸ್ತಿ ಮತ್ತು ಆದಾಯದಿಂದ ವಂಚಿತರಾಗಿದ್ದರು ಎಂದು ದಾಖಲೆಗಳು ತಿಳಿಸಿವೆ. ಮಗಳು ಪವಿತ್ರಾ ಸ್ವಂತ ಮನೆ ಹೊಂದಿದ್ದರೂ ವಯೋವೃದ್ಧ ತಾಯಿಯನ್ನು ಬಾಡಿಗೆ ಮನೆಯಲ್ಲಿ ವಾಸಿಸಲು ಬಿಟ್ಟಿರುವುದು ನೈತಿಕ ಹಾಗೂ ಕಾನೂನುಬದ್ಧ ಕರ್ತವ್ಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.



