
ಮೈಸೂರು : ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶದ ಬಳಿಕ ಮತ್ತೆ ವಿವಾದ ತೀವ್ರಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲೆ-ಕಾಲೇಜುಗಳಲ್ಲಿ ಕೇಸರಿ ಶಾಲು ಧರಿಸಿ ಬರುವುದಕ್ಕೆ ಅವಕಾಶ ಇಲ್ಲ, ಆದರೆ ಜನಿವಾರ, ರುದ್ರಾಕ್ಷಿ, ಶಿವಧಾರ ಹಾಗೂ ಹಿಜಾಬ್ ಸೇರಿದಂತೆ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳಿಗೆ ಸಂಬಂಧಿಸಿದ ಚಿಹ್ನೆಗಳನ್ನು ಧರಿಸಲು ಅವಕಾಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದು, ಈ ಹೇಳಿಕೆಗೆ ಸಂಬಂಧಿಸಿ ಹಿಂದೂಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರದ ಈ ನಿರ್ಧಾರವನ್ನು ವಿರೋಧಿಸುತ್ತಿದ್ದು, ಆದೇಶ ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅನೇಕ ಸಂಘಟನೆಗಳು ಎಚ್ಚರಿಕೆ ನೀಡಿವೆ. ಜೊತೆಗೆ ಬಿಜೆಪಿ ನಾಯಕರು ಕೂಡ ಈ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಿಎಂ ಅವರು ವಿಭಿನ್ನ ಧಾರ್ಮಿಕ ಆಚರಣೆಗಳಿಗೆ ಗೌರವ ನೀಡಲಾಗುತ್ತಿದೆ, ಆದರೆ ಕೇಸರಿ ಶಾಲು ಶಾಲಾ-ಕಾಲೇಜುಗಳಲ್ಲಿ ಅನುಮತಿಸಲಾಗುವುದಿಲ್ಲ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.





