ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಖ್ಯಾತ ತವಿಲ್ ವಾದಕ ಎಸ್. ಮಾರಿಸೆಲ್ವಂ ಅವರು ಆಕಾಶವಾಣಿಯ ಸಂಗೀತ ಆಡಿಷನ್ನಲ್ಲಿ ‘ಎ’ ಗ್ರೇಡ್ ಕಲಾವಿದರಾಗಿ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಆಕಾಶವಾಣಿ ಭದ್ರಾವತಿಯ ಸ್ಟುಡಿಯೋದಲ್ಲಿ ನಡೆದ ಸಂಗೀತ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಮಾರಿಸೆಲ್ವಂ ಅವರ ಪ್ರದರ್ಶನವನ್ನು ಕೇಂದ್ರ ಆಡಿಷನ್ ಮಂಡಳಿ (CAB) ಪರಿಶೀಲಿಸಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತದ ವಾದ್ಯ ವಿಭಾಗದ ತವಿಲ್ ಕಲಾವಿದರಾಗಿ ‘ಎ’ ಗ್ರೇಡ್ಗೆ ಉನ್ನತೀಕರಿಸಿ ಅನುಮೋದನೆ ನೀಡಿದೆ. ಈ ಕುರಿತು ಆಕಾಶವಾಣಿ ಭದ್ರಾವತಿಯ ಕಾರ್ಯಕ್ರಮ ಮುಖ್ಯಸ್ಥರು ಹಾಗೂ ನಿಲಯ ನಿರ್ದೇಶಕರಾದ ಎಲ್.ಓ. ನಂದನ್ ಕುಮಾರ್ ಅಧಿಕೃತ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ಶ್ರೀ ಶಾರದಾ ಪರಮೇಶ್ವರಿ ಅಮ್ಮನವರ ಹಾಗೂ ಜಗದ್ಗುರುಗಳ ಆಶೀರ್ವಾದದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಸಂಭ್ರಮಿಸಲಾಗುತ್ತಿದ್ದು, ಇನ್ನು ಮುಂದೆ ಆಕಾಶವಾಣಿ ಭದ್ರಾವತಿ ಕೇಂದ್ರದ ಅಗತ್ಯಕ್ಕೆ ಅನುಗುಣವಾಗಿ ಮಾರಿಸೆಲ್ವಂ ಅವರಿಗೆ ಕಾರ್ಯಕ್ರಮಗಳಲ್ಲಿ ಅವಕಾಶ ದೊರೆಯಲಿದೆ. ಶೃಂಗೇರಿಯ ಕಲಾವಿದರೊಬ್ಬರು ಆಕಾಶವಾಣಿಯ ಪ್ರತಿಷ್ಠಿತ ‘ಎ’ ಗ್ರೇಡ್ ಗೌರವಕ್ಕೆ ಪಾತ್ರರಾಗಿರುವುದು ಸಂಗೀತಾಸಕ್ತರು ಹಾಗೂ ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.
