
ಬೆಂಗಳೂರು: ರಾಜ್ಯ ಸರ್ಕಾರದ ನಾಲ್ಕು ಸಾರಿಗೆ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC), ಬೆಂಗಳೂರು ಮಹಾನಗರ ಸಾರಿಗೆ ನಿಗಮ(BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ(NWKRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ನೌಕರರಿಗೆ ಶೇ.12.5ರಷ್ಟು ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದ್ದರೂ, ಈ ನಿರ್ಧಾರಕ್ಕೆ ಸಾರಿಗೆ ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೇ 20ರಂದು ರಾಜ್ಯವ್ಯಾಪಿ ಸಾರಿಗೆ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಬುಧವಾರ AUTUC ಕಚೇರಿಯಲ್ಲಿ ಜಂಟಿ ಕ್ರಿಯಾ ಸಮಿತಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿ, ಶೇ.25ರವರೆಗೆ ವೇತನ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಲಾಯಿತು. 2025ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಸರ್ಕಾರ ವೇತನ ಹೆಚ್ಚಳ ಆದೇಶ ಹೊರಡಿಸಿದ್ದರೂ, ಈ ಪರಿಷ್ಕರಣೆಯನ್ನು ತಿರಸ್ಕರಿಸಿದ್ದೇವೆ ಎಂದು ನೌಕರರು ಸ್ಪಷ್ಟಪಡಿಸಿದ್ದಾರೆ. ಕಳೆದ 20ರಿಂದ 30 ವರ್ಷಗಳಿಂದ ಸಾರಿಗೆ ನೌಕರರಿಗೆ ಅನ್ಯಾಯ ಹಾಗೂ ನಷ್ಟವಾಗುತ್ತಿದೆ ಎಂದು ಆರೋಪಿಸಿದ ಜಂಟಿ ಕ್ರಿಯಾ ಸಮಿತಿ, ಮೇ 20ರಂದು ನಡೆಯುವ ಮುಷ್ಕರದಲ್ಲಿ ಸುಮಾರು 1 ಲಕ್ಷ 15 ಸಾವಿರ ನೌಕರರು ಭಾಗಿಯಾಗಲಿದ್ದು, ನಾಲ್ಕು ನಿಗಮಗಳ ಬಸ್ಗಳು ಬಂದ್ ಆಗಲಿವೆ ಎಂದು ಎಚ್ಚರಿಕೆ ನೀಡಿದೆ. ರಾಜ್ಯ ಸರ್ಕಾರ ಕಾರ್ಮಿಕ ಸಂಘಟನೆಗಳ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿರುವ ನೌಕರರು, ತಮ್ಮ ಬೇಡಿಕೆ ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ.




