ನವದೆಹಲಿ: ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆಯೇ ಇಂಧನ ಉಳಿಕೆ ಹಾಗೂ ಸರ್ಕಾರಿ ವೆಚ್ಚ ಕಡಿತಕ್ಕೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ತಾವು ಹೇಳಿದ ಮಾತನ್ನು ಕಾರ್ಯರೂಪಕ್ಕೂ ತಂದಿದ್ದು, ತಮ್ಮ ಎಸ್ಪಿಜಿ ಬೆಂಗಾವಲು ಪಡೆಯಲ್ಲಿರುವ ವಾಹನಗಳ ಸಂಖ್ಯೆಯನ್ನು 50 ಶೇಕಡಾ ಕಡಿಮೆ ಮಾಡಲು ವಿಶೇಷ ಸೂಚನೆ ನೀಡಿದ್ದಾರೆ. ವಿದೇಶಿ ಪ್ರವಾಸಗಳನ್ನು ತಪ್ಪಿಸುವುದು, ಚಿನ್ನ ಖರೀದಿ ಕಡಿಮೆ ಮಾಡುವುದು ಹಾಗೂ ಅನಗತ್ಯ ಖರ್ಚು ನಿಯಂತ್ರಿಸುವಂತೆ ದೇಶದ ಜನತೆಗೆ ಮನವಿ ಮಾಡಿದ್ದ ಪ್ರಧಾನಿ, ಈಗ ಸ್ವತಃ ಮಾದರಿ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿಯವರ ಸೂಚನೆಯಂತೆ ವಿಶೇಷ ರಕ್ಷಣಾ ಗುಂಪು (ಎಸ್ಪಿಜಿ) ಈಗಾಗಲೇ ಬೆಂಗಾವಲು ಪಡೆಯ ಗಾತ್ರವನ್ನು ಅಧಿಕೃತವಾಗಿ ಕಡಿಮೆ ಮಾಡುವ ಪ್ರಕ್ರಿಯೆ ಆರಂಭಿಸಿದ್ದು, ಯಾವುದೇ ಭದ್ರತಾ ನಿಯಮಗಳಲ್ಲಿ ಸಡಿಲಿಕೆ ಆಗದಂತೆ ಬ್ಲೂ ಬುಕ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎನ್ನಲಾಗಿದೆ. ದೆಹಲಿಯ ಹೊರಗಿನ ಇತ್ತೀಚಿನ ಪ್ರವಾಸಗಳಲ್ಲಿ ಮೋದಿ ಅವರ ಬೆಂಗಾವಲು ವಾಹನಗಳ ಸಂಖ್ಯೆ ಕಡಿಮೆಯಾಗಿರುವುದು ಗಮನಸೆಳೆದಿದ್ದು, ಮುಂದಿನ ದಿನಗಳಲ್ಲಿ ಬೆಂಗಾವಲು ಪಡೆಯಲ್ಲಿನ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲು ಸೂಚನೆ ನೀಡಲಾಗಿದ್ದರೂ, ಹೆಚ್ಚುವರಿ ವೆಚ್ಚ ತಪ್ಪಿಸಲು ಹೊಸ ವಾಹನಗಳ ಖರೀದಿ ಬೇಡ ಎಂದು ಪ್ರಧಾನಿ ತಿಳಿಸಿದ್ದಾರೆ. ಭಾನುವಾರ ಹೈದರಾಬಾದ್ ಭೇಟಿಯ ವೇಳೆ ಇಂಧನ ಹಾಗೂ ಚಿನ್ನದ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿ ಜನರಿಗೆ ಕರೆ ನೀಡಿದ್ದನ್ನು ಉಲ್ಲೇಖಿಸಿರುವ ಅಧಿಕಾರಿಗಳು, ಪ್ರಧಾನಿಯವರ ವೈಯಕ್ತಿಕ ಉಪಕ್ರಮ ಇತರ ಸರ್ಕಾರಿ ಇಲಾಖೆಗಳಿಗೂ ಮಾದರಿಯಾಗಲಿದೆ ಎಂದು ಹೇಳಿದ್ದಾರೆ. ಈಗಾಗಲೇ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳು ವೆಚ್ಚ ಕಡಿತದ ಯೋಜನೆ ರೂಪಿಸುತ್ತಿದ್ದು, ನೌಕರರು ಮೆಟ್ರೋ ಬಳಕೆ ಹೆಚ್ಚಿಸುವುದು, ಕಾರ್ಪೂಲಿಂಗ್ ಅನುಸರಿಸುವುದು ಹಾಗೂ ದೊಡ್ಡ ಭೋಜನ ಕಾರ್ಯಕ್ರಮಗಳನ್ನು ತಪ್ಪಿಸುವ ಬಗ್ಗೆ ಚಿಂತನೆ ನಡೆಸಿವೆ. “ಎಲ್ಲಾ ಇಲಾಖೆಗಳು ಇಂಧನ ಬಳಕೆಯನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಗುರುತಿಸುತ್ತಿವೆ. ಪ್ರಧಾನಿಯವರ ಸಂದೇಶ ಎಲ್ಲರಿಗೂ ಅನ್ವಯಿಸುತ್ತದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ವೇಳೆ ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಅನೌಪಚಾರಿಕ ಸಚಿವರ ಸಭೆಯಲ್ಲಿ ಅನಗತ್ಯ ಪ್ರಯಾಣ ಕಡಿಮೆ ಮಾಡುವ ಮೂಲಕ ಇಂಧನ ಬಳಕೆಯನ್ನು ತಗ್ಗಿಸುವ ಕುರಿತು ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ.
