
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕೆಳಗೂರು ಕಾಫಿ ಎಸ್ಟೇಟ್ ನಲ್ಲಿ ಒಂದೂವರೆ ವರ್ಷದ ಬಾಲಕ ಶಿವಂ ಕಾಣೆಯಾಗಿದ್ದ ಘಟನೆ ಆತಂಕ ಮೂಡಿಸಿದ್ದರೂ, ಬಾಳೂರು ಪೊಲೀಸರ ನಿರಂತರ 12 ಗಂಟೆಗಳ ಕಾರ್ಯಾಚರಣೆಯಿಂದ ಮಗು ಸುರಕ್ಷಿತವಾಗಿ ಪತ್ತೆಯಾಗಿ ಕುಟುಂಬದವರಿಗೆ ಮರಳಿದೆ. ಮಧ್ಯಪ್ರದೇಶದ ಭೋಪಾಲ್ ಮೂಲದ ಗೋನು ಮತ್ತು ಸೋನಾ ದಂಪತಿ ಕಳೆದೊಂದು ವಾರದ ಹಿಂದೆ ಕೆಲಸದ ನಿಮಿತ್ತ ಎಸ್ಟೇಟ್ಗೆ ಬಂದಿದ್ದು, ತಮ್ಮ ಐದು ಮಕ್ಕಳನ್ನು ನೋಡಿಕೊಳ್ಳಲು ಮಹಿಳೆಯೊಬ್ಬರನ್ನು ನೇಮಿಸಿ ಕೂಲಿಗೆ ತೆರಳಿದ್ದರು. ಮೇ 6ರಂದು ಸಂಜೆ ಮಗು ಶಿವಂ ಅಳುತ್ತಿದ್ದ ಕಾರಣ 8 ವರ್ಷದ ಬಾಲಕಿಯೊಂದಿಗೆ ನಾಲ್ವರು ಮಕ್ಕಳನ್ನು ಕಳುಹಿಸಲಾಗಿತ್ತು. ಬಳಿಕ ಮಕ್ಕಳು ಕಾಫಿ ತೋಟದಿಂದ ಮನೆಗೆ ಬಂದು ಊಟ ಮಾಡಿ ಮಲಗಿದರೂ, ಒಂದೂವರೆ ವರ್ಷದ ಶಿವಂನನ್ನು ರಸ್ತೆ ಮಧ್ಯೆ ಬಿಟ್ಟು ಬಂದಿರುವುದು ಯಾರಿಗೂ ಗೊತ್ತಾಗಿರಲಿಲ್ಲ. ಸಂಜೆ ಪೋಷಕರು ಮನೆಗೆ ಮರಳಿದಾಗ ಮಗು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ತಕ್ಷಣವೇ ಬಾಳೂರು ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂಡಿಗೆರೆ ವೃತ್ತ ನಿರೀಕ್ಷಕ ರಾಜಶೇಖರ್ ನೇತೃತ್ವದಲ್ಲಿ ಡಾಗ್ ಸ್ಕ್ವಾಡ್, ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಭಾರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಮಳೆ ನಡುವೆ ಇಡೀ ರಾತ್ರಿ ಹುಡುಕಾಟ ನಡೆಸಿದರೂ ಮಗು ಪತ್ತೆಯಾಗಿರಲಿಲ್ಲ. ಆದರೆ ಇಂದು ಬೆಳಗ್ಗೆ ಮನೆಯಿಂದ ಸುಮಾರು 500 ಮೀಟರ್ ದೂರದ ಹಳ್ಳದಲ್ಲಿ ಮಳೆ ಮತ್ತು ಚಳಿಯ ನಡುವೆ ನಡುಗುತ್ತಾ ಕೂತಿದ್ದ ಶಿವಂನನ್ನು ಪೊಲೀಸರು ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ. ಪೊಲೀಸರ ತ್ವರಿತ ಹಾಗೂ ಮಾನವೀಯ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




