
ಇದು ಮಾರ್ಚ್,
ಅನೇಕ ಜನರ ಬದುಕಿನ ಮಗ್ಗಲು ಬದಲಿಸುವ ಕಾಲವಿದು. ಎಸ್ಎಸ್ಎಲ್ಸಿ, ಸೆಕೆಂಡ್ ಪಿಯುಸಿ ಮುಗಿಯಿತು. ಮುಂದೆ ಯಾವ ಕಾಲೇಜು? ಯಾವ ಊರು? ಓದು ಸಾಕಾ..? ಯಾವುದಾದ್ರು ಕೋರ್ಸಿಗೆ ಸೇರಿಕೊಂಡು ಬಿಡ್ಲಾ..? ಈಗ ಓದಿರೋ ಓದಿಗೆ ಕೆಲ್ಸಾ ಸಿಗುತ್ತಾ..? ಈ ಓದು ಮುಗಿದ್ರೆ ಮದ್ವೆ ಮಾಡ್ತೀವಿ ಅಂತ ಮಾತಾಡಿಕೊಳ್ತಾ ಇರೋ ಅಪ್ಪ-ಅಮ್ಮನನ್ನು ಕನ್ವಿನ್ಸ್ ಮಾಡೋದು ಹೇಗೆ? ಅಂತ ಕೆಲವರ ಯೋಚನೆಯಾದ್ರೆ, ಇನ್ನೇನು ಡಿಗ್ರಿ ಮುಗೀತು ಅಂದು ಕೊಳ್ಳೋರದ್ದು ಮತ್ತೊಂದು ಯೋಚನೆ. ಯಾವ ಕಂಪನಿಯಲ್ಲಿ ಕೆಲ್ಸ ಖಾಲಿ ಇದೆ..? ಯಾವುದಾದ್ರೂ ಇಲಾಖೆಯಲ್ಲಿ ಕಾಲ್ಫರ್ ಆಗಿದ್ಯಾ..? ಅಷ್ಟು ದೂರದ ಕೆಲ್ಸಕ್ಕೆ ಮನೇಲಿ ಕಳಿಸ್ತಾರಾ..? ಆ ಊರಲ್ಲಿ ಒಬ್ಳೆ ಇರೋದಕ್ಕೆ ಆಗುತ್ತಾ..? ಮನೇಲಿ ಮದ್ವೆಗೆ ಗಂಡು ನೋಡ್ತಾ ಇದ್ದಾರೆ, ಸುಮ್ನೆ ಒಪ್ಕೊಂಡು ಬಿಡ್ಲಾ..? ಛೇ! ಬಿ.ಎ ಓದೋ ಬದ್ಲು ಬಿ.ಕಾಂ ಮಾಡಿದ್ರೆ ಚೆನ್ನಾಗಿ ಇರ್ತಾ ಇತ್ತು, ಭಗವಂತಾ… ನನ್ನ ಇಂಗ್ಲೀಷ್ ಎಷ್ಟು ಕೆಟ್ಟದಾಗಿದೆ.. ಇನ್ನು ಕೆಲ್ಸ ಸಿಗೋದಾದ್ರು ಹೇಗೆ..? ಎಂ.ಎ ಓದಿದ್ರೆ… ಹೀಗೆ ಒಬ್ಬೊಬ್ಬರ ತಲೆಯಲ್ಲಿ ನೂರಾರು ಟನ್ ತೂಕದ ಪ್ರಶ್ನೆಗಳು. ಬದುಕಿನ ಕವಲು ದಾರಿಯಲ್ಲಿ ಬಂದು ನಿಂತಾಗಿದೆ. ಮುಂದಿನ ದಾರಿ ಹೇಗೆ ಸಾಗಬೇಕು ಎಂದು ನಿರ್ಣಯಿಸಬೇಕಾಗಿದೆ. ಹೌದು ತಾನೆ! ಆದರೆ ಗೆಳೆಯರೇ ಮತ್ತು ಗೆಳತಿಯರೇ .. ನಿಮಗೊಂದು ಮಾತು ಹೇಳ್ತೀನಿ ಹೀಗೆ ಬದುಕಿನ ತಿರುವಿನಲ್ಲಿ ನಿಂತಾಗ ಕನ್ಫ್ಯೂಸ್ ಆಗೋದು ಸಹಜವೇ. ಏನೊಂದು ತೋಚದಂತಾಗಿ ಬಿಡುತ್ತದೆ. ನೋಡಿ, ತಮಾಷೆ ಹೇಗಿರುತ್ತೆ ಅಂತ, ನೀವು ಡಿಗ್ರಿ ಮುಗಿಸಿದ್ದೀರಿ, ಸ್ವಂತ ನಿರ್ಧಾರ ತಗೊಳ್ಳೋ ಕ್ಯಾಪಾಸಿಟಿ ನಿಮಗಿದೆ, ಯಾವುದು ಸರಿ, ಯಾವುದು ತಪ್ಪು ಅನ್ನೋ ವಿವೇಕವೂ ನಿಮಗಿದೆ. ಆದರೆ ಇವತ್ತಿನ ಈ ಸಂದಿಗ್ಧತೆಗೆ ನೀವು ಒಂದು ನಿರ್ಧಾರಕ್ಕೆ ಬರಲು ಆಗ್ತಾ ಇಲ್ಲ. ಒಬ್ಬೊಬ್ಬರು ಒಂದೊಂದು ಸಲಹೆ ಕೊಡ್ತಾರೆ. ಮುಂದೆ ಓದ್ತೀನಿ ಅಂತಂದ್ರೆ ಹತ್ತಾರು ಕಾಲೇಜುಗಳಲ್ಲಿ ಯಾವುದಕ್ಕೆ ಸೇರಿಕೊಳ್ಳಬೇಕು..? ಇನ್ನು ಜಾಬ್ ಮಾಡ್ತೀನಿ ಅಂತಂದ್ರೆ ಯಾವ ಕೆಲ್ಸ? ಎಲ್ಲಿ? ಸಂಬಳ? ಉಳಿದುಕೊಳ್ಳೋಕೆ ವ್ಯವಸ್ಥೆ? ಈ ರೀತಿಯ ನಾನಾ ಗೊಂದಲಮಯ. ಅದು ಮಾಡ್ಲಾ, ಇದು ಮಾಡ್ಲಾ ಅಂತ ಯೋಚಿಸೋದ್ರಲ್ಲೆ ಎರಡು ಮೂರು ತಿಂಗಳು ಕಳೆದು, ಮತ್ತೆ ಒಂದು ವರ್ಷ ಏನೂ ಮಾಡದೆ ಮನೆಯಲ್ಲಿ ಕುಳಿತವರು ಅದೆಷ್ಟು ಮಂದಿ ಇಲ್ಲ ಹೇಳಿ..? ಬಟ್ ನೀವು ಹಾಗಾಗಬೇಡಿ ನಾನಾಗಲೇ ಹೇಳಿದಂತೆ ನೀವೀಗ ಕವಲು ದಾರಿಗೆ ಬಂದು ನಿಂತಿದ್ದೀರಿ ಇಲ್ಲಿ ಬಾ, ಇಲ್ಲಿ ಬಾ ಅಂತ ಹಿಡಿದು ಜಗ್ಗಾಡಲು ಯಾರಿಗೂ ಅವಕಾಶ ಕೊಡಬೇಡಿ. ಎತ್ತ ಸಾಗಬೇಕು? ನಿಮ್ಮ ಗುರಿ ಏನು ಅಂತ ನೀವೇ ನಿರ್ಧರಿಸಿಕೊಳ್ಳಿ ಸಾಗುವ ಹಾದಿಯ ಆಯ್ಕೆಯೂ ನಿಮ್ಮದೇ ಆಗಿರಲಿ. ಆ ಬಗ್ಗೆ ಯಾರನ್ನಾದರೂ ಕೇಳಿ ಮಾಹಿತಿ ಪಡೆಯಿರಿ. ಮಾರ್ಗದರ್ಶನ ಪಡೆದುಕೊಳ್ಳಿ. ಆದರೆ ನಿರ್ಧಾರ ತೆಗೆದುಕೊಳ್ಳಲು ಮಾತ್ರ ಯಾರನ್ನೂ ಅವಲಂಬಿಸಬೇಡಿ. ನಿರ್ಧಾರ ಅದು ನಿಮ್ಮ ಸ್ವಂತದ್ದಾಗಿರಬೇಕು. ಇಲ್ಲಿ ಇನ್ನೊಂದು ಮಾತು ಹೇಳಬೇಕಿದೆ. ಡಿಗ್ರಿ ಮುಗಿದಿದೆ ಅಲ್ವಾ..? ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಅನ್ನೋ ಛಲ ನಿಮಗಿದೆ. ಒಂದು ಕೆಲ್ಸ, ಒಂದಿಷ್ಟು ಸಂಪಾದನೆ ಬೇಕು ಅನ್ಸುತ್ತೆ ಅಲ್ವಾ..? ನಾನು ತುಂಬಾ ಜನರನ್ನು ಗಮನಿಸಿದ್ದೇನೆ. ನಮ್ಮ ಕಛೇರಿಗೆ ತಮ್ಮದೊಂದು ಬಯೋಡಾಟ ಹಿಡಿದು ತರೋರಿಗೆ ತಾನು ಏನು ಮಾಡಬಲ್ಲೆ ಎಂಬುದರ ಕುರಿತು ಒಂದು ಸ್ಪಷ್ಟತೆ ಇರುವುದಿಲ್ಲ. ನಂಗೆ ಯಾವುದಾದ್ರೂ ಒಂದು ಕೆಲ್ಸ ಕೊಡ್ಸಿ ಅಂತಾರೆ. ಊಹುಂ ಅದಲ್ಲ, ನೀವೇನು ಮಾಡ್ತಿರೋ… ನಿಮ್ಮ ಆಸಕ್ತಿ ಕ್ಷೇತ್ರ ಯಾವುದೋ ಅಲ್ಲಿಯೇ ಪ್ರಯತ್ನಿಸಿ ಮತ್ತು ನಿಮ್ಮ ಅರ್ಹತೆಗೆ ಅನುಗುಣವಾದ ಕೆಲಸವನ್ನೆ ಚಾಯ್ಸ್ ಮಾಡ್ಕೊಳ್ಳಿ. ಡಿಗ್ರಿ ಮುಗಿಸಿದವರು ಬಟ್ಟೆ ಅಂಗಡೀಲಿ ಸೇಲ್ಸ್ಗರ್ಲ್ ಆದ್ರೆ ಹೇಗೆ? ಇಲ್ಲಿ ನಾನು ಬಟ್ಟೆ ಅಂಗಡೀಲಿ ಕೆಲ್ಸ ಮಾಡೋದು ಘನತೆಗೆ ಕಮ್ಮಿ ಅಂತ ಹೇಳ್ತಾ ಇಲ್ಲ. ಕಾರಣಾಂತರದಿಂದ ಎಂಟು ಒಂಭತ್ತು ಕ್ಲಾಸ್ ಓದಿ ಶಾಲೆ ಬಿಟ್ಟವರು ಈ ಕೆಲ್ಸವನ್ನು ಮಾಡುತ್ತಾ ತನ್ನ ಸಂಪಾದನೆ ಅಂತ ಕೂಡಿಟ್ಟು ಕೊಳ್ತಾರೆ. ಅವರಿಗೆ ಇನ್ನಾವುದೋ ಕಂಪನಿಯಲ್ಲಿ ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅಂತಹವರ ಅನ್ನವನ್ನು ನೀವು ಕಸಿದು ಕೊಳ್ಳದಿರಿ ಅಂತ ಅಷ್ಟೆ. ಕೆಲ್ಸ ಸಿಕ್ಕಿಲ್ಲ ಅಂದ್ರೆ ಬೇಸರ ಯಾಕೆ..? ಕಸೂತಿ, ಟೈಲರಿಂಗ್, ರಂಗೋಲಿ, ಒಳ್ಳೆಯ ಅಡುಗೆ, ಪೋಟೋ ಶಾಫ್, ವೆಬ್ಡಿಸೈನ್, ಮೆಹಂದಿ, ಸಂಗೀತ, ಓಹ್! ಕಲಿಯೋದಿಕ್ಕೆ ಎಷ್ಟೆಲ್ಲ ಇದೆ. ತೀರಾ ಮನೇಲಿ ಕೂತು ಬೋರಾದ್ರೆ ನಮ್ಮ ಆಫೀಸಿಗೆ ಬನ್ನಿ. ಒಂದಿಷ್ಟು ಕೆಲ್ಸ ಕೊಡ್ತೀವಿ…ನಿಮ್ಮನ್ನ ನೀವೇ ವೇಸ್ಟ್ ಅಂತ ಮಾತ್ರ ಅಂದ್ಕೋಬೇಡಿ.. ಏನಂತೀರಾ?




