
ಚಾಮರಾಜನಗರ : ಭಗವಾನ್ ಮಹಾವೀರರು ವಿಶ್ವದ ಬೆಳಕು. ಜಗತ್ತಿಗೆ ಶಾಂತಿ,ಸತ್ಯ,ಅಹಿಂಸೆ ಬೋಧಿಸಿದ ಭಾರತೀಯ ಶ್ರೇಷ್ಠ ಪುಣ್ಯ ಪುರುಷರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಉಪನ್ಯಾಸಕರು ಆದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜಿಲ್ಲಾಡಳಿತ,ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಡಾ.ರಾಜಕುಮಾರ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಾ ಪ್ರಸ್ತುತ ಮನುಷ್ಯನಿಗೆ ಆಂತರಿಕ ಶಾಂತಿ ತುಂಬಾ ಅಗತ್ಯವಾಗಿದೆ. ಶಾಂತಿಯನ್ನು ಕಾಪಾಡಿಕೊಳ್ಳಲು ಮಾನವ ಧ್ಯಾನ ಮತ್ತು ಮೌನದ ಮೂಲಕ ಸಾಧಿಸಿಕೊಳ್ಳಬಹುದು. ಅನ್ಯತಾ ವಿಷಯಗಳಿಗೆ ತಲೆಹಾಕದೆ ತನ್ನನ್ನು ತಾನು ಅರಿಯುವ ಕಾರ್ಯವನ್ನು ಮಾಡುವ ಮೂಲಕ ಮಾನವ ಜೀವನವನ್ನು ಪವಿತ್ರ ಗೊಳಿಸಿಕೊಳ್ಳಬೇಕು.ಭಗವಾನ್ ಮಹಾವೀರರು ತಮ್ಮ 30ನೇ ವಯಸ್ಸಿನಲ್ಲಿ ಧ್ಯಾನವನ್ನು ಮತ್ತು ತಪಸ್ಸನ್ನು ಆಚರಿಸುವ ಮೂಲಕ ನಿರಂತರ 12 ವರ್ಷಗಳ ಕಾಲ ಸತ್ಯವನ್ನು ಅರಿಯುವ ಕಾರ್ಯವನ್ನು ಮಾಡಿ ಜಗತ್ತಿಗೆ ಅಹಿಂಸೆಯ ಪರಮ ಸತ್ಯವನ್ನು ಬೋಧಿಸಿದರು. ಅಹಿಂಸೆ, ಸತ್ಯ, ಕಳ್ಳತನ ಮಾಡದಿರುವುದು, ಚಾರಿತ್ರ್ಯ, ಹಾಗೂ ಅಧಿಕ ಸಂಪತ್ತನ್ನು ಸಂಗ್ರಹ ಮಾಡದಿರುವ ಮಹತ್ತರವಾದ ತತ್ವಗಳನ್ನು ಬೋಧಿಸಿದ ಮಹಾವೀರರು ಇಂದು ಜಗತ್ತಿಗೆ ಇವರ ಸಂದೇಶ ತುಂಬಾ ಅಗತ್ಯವಾಗಿದೆ. ಆರ್ಥಿಕ ಮುನ್ನಡೆಯನ್ನು ಸಾಧಿಸಿ ಸಾಮ್ರಾಜ್ಯ ದಾಹದ ಮೂಲಕ ಅಹಂಕಾರ,ದರ್ಪ ತೋರಿಸುವ ಮೂಲಕ ಯುದ್ಧ ಕದನಕ್ಕೆ ದಾರಿಯಾಗಿ ಜಗತ್ತು ಇಂದು ಸಂಕಷ್ಟಕ್ಕೆ ಒಳಗಾಗಿದೆ. ರಾಜ್ಯ, ಸಂಪತ್ತು,ವಜ್ರ ವೈಡೂರ್ಯಗಳು ಶಾಶ್ವತವಲ್ಲ ಎಂಬ ಸತ್ಯವನ್ನು ಅರಿತ ವರ್ಧಮಾನ ಮಹಾವೀರರು ತ್ರಿ ರತ್ನಗಳನ್ನು ತಿಳಿಸಿದವರು. ಇಡೀ ಭಾರತದ ಮೂಲೆ ಮೂಲೆಗಳಲ್ಲಿ ಜೈನ ಧರ್ಮದ ಶಾಸನಗಳು, ಕಲೆ, ವಾಸ್ತು ಶಿಲ್ಪ ಕಾಣಬಹುದು ಚಾಮರಾಜನಗರ ಜಿಲ್ಲೆಯಲ್ಲಿ ವಿಶ್ವಕ್ಕೆ ಮಾದರಿಯಾದ ಜೈನ ಕೇಂದ್ರವಾದ ಕನಕಗಿರಿ, ಚಾಮರಾಜನಗರದ ಪಾಶ್ವನಾಥ ಮಂದಿರಗಳು,ಕುದೇರು, ಉಮ್ಮತ್ತೂರು, ಬೇಗೂರು ಗುಂಡ್ಲುಪೇಟೆ ಕೊಳ್ಳೇಗಾಲ ಹನೂರುಗಳಲ್ಲಿ ನೂರಾರು ಜೈನ ಪರಂಪರೆಯ ಶಾಸನಗಳು ದೊರೆತಿವೆ . ಜೈನ ಪರಂಪರೆಯ ಜನ ಶಾಂತಿ ಪ್ರಿಯರು.ಸಮಾಜಕ್ಕೆ ಸದಾ ಕಾಲ ಸಹಾಯವನ್ನು ನೀಡುವ ಶ್ರೇಷ್ಠರು ಎಂದು ಬಣ್ಣಿಸಿದರು.
ಉದ್ಘಾಟನೆಯನ್ನು ಕಾವೇರಿ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ ಮರಿಸ್ವಾಮಿ ಉದ್ಘಾಟಿಸಿ ಪ್ರಪಂಚದಲ್ಲಿ ಭ್ರಷ್ಟಾಚಾರ,ಯುದ್ಧ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಮಹಾವೀರದ ತತ್ವ ಆದರ್ಶಗಳು ಸಮಾಜಕ್ಕೆ ಸಹಕಾರಿಯಾಗಿವೆ. ಸಕಲ ಪ್ರಾಣಿಗಳಗೂ ಜೀವಿಸುವ ಹಕ್ಕಿದೆ ಎಂಬ ಶಾಂತಿ ಬೋಧನೆ ನಡೆಸಿದ ಇವರು ಇನ್ನೊಬ್ಬರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ದಾರಿಯಲ್ಲಿ ಸಾಗುವ ಮೂಲಕ ಸುಖದ ಬದುಕನ್ನು ನಡೆಸಬೇಕು ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗ್
ರ್ ರವರು ಮಹಾವೀರರ ಜೀವನ ಮತ್ತು ಮೌಲ್ಯಗಳ ಜಾಗೃತಿ ಮೂಡಿಸಿಕೊಂಡು ಉತ್ತಮ ಬದುಕನ್ನು ನಡೆಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೈನ ಸಮಾಜದ ಮುಖಂಡರಾದ ನಿರ್ಮಲ್ ಕುಮಾರ್, ಕನ್ನಯ್ಯ ಲಾಲ್,ಉಲ್ಲಾಸ್,ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜು, ನಗರಸಭೆಯ ಪೌರಾಯುಕ್ತರಾದ ಪರಶುರಾಮ ಎಂ ಚಲವಾದಿ ಉಪಸ್ಥಿತರಿದ್ದರು.
ಮಹಾವೀರರ ಭವ್ಯ ಮೆರವಣಿಗೆ.
ಜಿಲ್ಲಾಡಳಿತ ಹಮ್ಮಿಕೊಂಡಿದ್ದ ವರ್ಧಮಾನ ಮಹಾವೀರ ಜಯಂತಿ ಅಂಗವಾಗಿ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಬೃಹತ್ ಬೆಳ್ಳಿರಥದಲ್ಲಿ ವರ್ಧಮಾನರ ಭಾವಚಿತ್ರಕ್ಕೆ ಅಲಂಕಾರ ಸಹಿತ ನಾದಸ್ವರದೊಂದಿಗೆ ಸಮಾಜದ ಬಂಧುಗಳು ಮೆರವಣಿಗೆ ಹೊರಟು ಜಿಲ್ಲಾಡಳಿತ ಭವನದ ವರೆಗೆ ಮೆರವಣಿಗೆ ನಡೆಯಿತು.




