ಕೊಟ್ಟಿಗೆಹಾರ: ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ತರುವೆ ಗ್ರಾಮ ಪಂಚಾಯಿತಿ ಪಿಡಿಓ ಸಿಂಚನಾ ಮನವಿ ಮಾಡಿದ್ದಾರೆ. ತರುವೆ ಗ್ರಾ.ಪಂ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಎರಡೂ ಬದಿಯಲ್ಲಿ ನಡೆದ ತ್ಯಾಜ್ಯ ಸಂಗ್ರಹ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಸದ ತೊಟ್ಟಿಗಳು ಇದ್ದರೂ ಜನರು ಅವನ್ನು ಬಳಸದೇ ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿರುವುದು ಕಳವಳಕಾರಿ ಎಂದು ಹೇಳಿದರು. ಪ್ರವಾಸಿಗರು ಹಾಗೂ ಹೆದ್ದಾರಿ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಭೇಟಿ ನೀಡುವ ಸ್ಥಳಗಳನ್ನು ಕಲುಷಿತಗೊಳಿಸದೆ ಸ್ವಚ್ಛತೆ ಕಾಪಾಡಬೇಕು ಮತ್ತು ಕಸವನ್ನು ಕಸದ ತೊಟ್ಟಿಗಳಲ್ಲೇ ಹಾಕಬೇಕು ಎಂದು ತಿಳಿಸಿದರು. ಜೊತೆಗೆ, ಹೆದ್ದಾರಿ ಬದಿಯ ಅಂಗಡಿ-ಮುಂಗಟ್ಟುಗಳ ವ್ಯಾಪಾರಿಗಳು ಕೂಡ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಉಷಾ, ಎಸ್ಡಿಎ ಉಮಾ ಹಾಗೂ ಸಿಬ್ಬಂದಿಗಳಾದ ಪ್ರವೀಣ್, ಕಾವ್ಯ, ಶಿಲ್ಪಾ, ವಿಠಲ, ಸಂದೀಪ್, ಅಶೋಕ್, ಸಂತೋಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
