ಮೂಡಿಗೆರೆ: ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಪ.ಪಂ.ಗೆ ಸೇರಿದ ವಾಣಿಜ್ಯ ಮಳಿಗೆಯನ್ನು ಬೇರೆಯವರಿಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಕಠಿಣ ಕ್ರಮ ಕೈಗೊಂಡು ₹1 ಲಕ್ಷ ದಂಡ ವಿಧಿಸಿರುವುದರ ಜೊತೆಗೆ, ಒಂದು ತಿಂಗಳೊಳಗೆ ಮಳಿಗೆಯನ್ನು ಅರ್ಹ ಫಲಾನುಭವಿಗೆ ಹಸ್ತಾಂತರಿಸಬೇಕೆಂದು ತೀರ್ಪು ನೀಡಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಬಿ.ಕೆ. ಲಕ್ಷ್ಮಣ್ ಕುಮಾರ್ ತಿಳಿಸಿದ್ದಾರೆ. ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರು ವರ್ಷಗಳ ಹಿಂದೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಟ್ಟಣದ ಪೊಲೀಸ್ ಠಾಣೆ ಎದುರಿನಲ್ಲಿರುವ ಪರಿಶಿಷ್ಟ ಜಾತಿಗೆ ಮೀಸಲಾದ ಮಳಿಗೆಯನ್ನು ಎಸ್ಸೀ ಸಮುದಾಯದ ವ್ಯಕ್ತಿ ಪಡೆದಿದ್ದರೂ, ಇಷ್ಟು ವರ್ಷಗಳಾದರೂ ಮಳಿಗೆ ಹಸ್ತಾಂತರಿಸದೆ ಅಧಿಕಾರಿಗಳು ಬೇರೆಯವರಿಗೆ ನೀಡಿರುವುದು ಅನ್ಯಾಯ ಎಂದು ಹೇಳಿದರು. ಈ ಕುರಿತು ಫಲಾನುಭವಿ ನ್ಯಾಯಾಲಯದ ಮೊರೆ ಹೋಗಿ ಕಾನೂನು ಹೋರಾಟ ನಡೆಸಿದ ಪರಿಣಾಮ ಇದೀಗ ಹೈಕೋರ್ಟ್ ಬಡ ದಲಿತರ ಪರವಾಗಿ ತೀರ್ಪು ನೀಡಿದೆ ಎಂದು ತಿಳಿಸಿದರು. ಇದೇ ವೇಳೆ ಬಿ.ಹೊಸಳ್ಳಿ ಗ್ರಾ.ಪಂ. ಸದಸ್ಯ ಶಿವಪ್ರಸಾದ್ ಮಾತನಾಡಿ, ಮೀಸಲು ಕ್ಷೇತ್ರದಲ್ಲೇ ಇಂತಹ ಘಟನೆ ನಡೆಯುತ್ತಿರುವುದು ನಾಚಿಗೇಡಿನ ಸಂಗತಿಯಾಗಿದ್ದು, ನ್ಯಾಯಾಲಯದ ತೀರ್ಪು ಸತ್ಯಕ್ಕೆ ಜಯ ತಂದಿದೆ ಎಂದರು. ಮುಂದಿನ ದಿನಗಳಲ್ಲಿ ಪ.ಪಂ. ಆಡಳಿತವು ಸಾಂವಿಧಾನಿಕ ಕಾನೂನುಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಹಾಗೂ ಒಂದು ತಿಂಗಳೊಳಗೆ ಅರ್ಹ ಫಲಾನುಭವಿಗೆ ಮಳಿಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಐ ತಾಲೂಕು ಅಧ್ಯಕ್ಷ ಕೆಳಗೂರು ರಮೇಶ್, ಸಹ ಕಾರ್ಯದರ್ಶಿ ರಾಜು ಬಾನಳ್ಳಿ ಹಾಗೂ ಯುವಜನ ಸಂಘಟನೆ ಮುಖಂಡ ಜಗದೀಶ್ ಚಕ್ರವರ್ತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮೂಡಿಗೆರೆ ಪಟ್ಟಣದಲ್ಲಿ ಸಿಪಿಐ ಪಕ್ಷ ಹಾಗೂ ವಿವಿಧ ಸಂಘಟನೆ ಮುಖಂಡರು ಸುದ್ದಿಗೋಷ್ಠಿ ನಡೆಸಿದರು.
