
ಗಿಳಿ (ಸಿಟ್ಟಸಿಫೋರ್ಮ್ಸ್) ವರ್ಗಕ್ಕೆ ಸೇರಿದ ಬುದ್ಧಿವಂತ ಮತ್ತು ಆಕರ್ಷಕ ಪಕ್ಷಿಯಾಗಿದ್ದು ವಿಶ್ವದಾದ್ಯಂತ ಸುಮಾರು 350ಕ್ಕೂ ಹೆಚ್ಚು ತಳಿಗಳಿವೆ. ಇವು ಸಾಮಾನ್ಯವಾಗಿ ಉಷ್ಣವಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ ಹಾಗೂ ಸಿಟ್ಟಿಸೀಡೇ (ನೈಜ ಗಿಳಿ) ಮತ್ತು ಕಕಾಟುಯ್ಡೇ ಎಂಬ ಎರಡು ಪ್ರಮುಖ ಕುಟುಂಬಗಳಾಗಿ ವರ್ಗೀಕರಿಸಲ್ಪಟ್ಟಿವೆ. ಬಾಗಿದ ಹಾಗೂ ಬಲಿಷ್ಠ ಕೊಕ್ಕು, ನೇರ ನಿಲುವು, ಬಲವಾದ ಕಾಲುಗಳು ಮತ್ತು ಬಣ್ಣ ಬಣ್ಣದ ರೆಕ್ಕೆಗಳು ಗಿಳಿಗಳ ಮುಖ್ಯ ಲಕ್ಷಣಗಳಾಗಿವೆ. ಹೆಚ್ಚಿನ ಗಿಳಿಗಳು ಹಸಿರು ಬಣ್ಣದ್ದಾಗಿದ್ದರೂ ಕೆಲವು ತಳಿಗಳು ಕೆಂಪು, ಹಳದಿ, ನೀಲಿ ಮುಂತಾದ ಹೊಳೆಯುವ ಬಣ್ಣಗಳನ್ನು ಹೊಂದಿರುತ್ತವೆ. ದಕ್ಷಿಣ ಅಮೆರಿಕ ಮತ್ತು ಆಸ್ಟ್ರೇಲಿಯಾ ಪ್ರದೇಶಗಳಲ್ಲಿ ಗಿಳಿಗಳ ವೈವಿಧ್ಯ ಹೆಚ್ಚು ಕಂಡುಬರುತ್ತದೆ. ಪ್ರಪಂಚದಲ್ಲಿ ಮಕಾವ್, ಆಫ್ರಿಕನ್ ಗ್ರೇ ಮತ್ತು ಬಡ್ಜಿಗಳಂತಹ ಅನೇಕ ಪ್ರಸಿದ್ಧ ತಳಿಗಳು ಕಂಡುಬರುತ್ತವೆ. ಬೀಜಗಳು, ಕಾಳುಗಳು, ಹಣ್ಣುಗಳು, ಮೊಗ್ಗುಗಳು ಮತ್ತು ಇತರ ಸಸ್ಯಜನ್ಯ ಪದಾರ್ಥಗಳು ಗಿಳಿಗಳ ಪ್ರಮುಖ ಆಹಾರವಾಗಿದ್ದು, ಕೆಲವೊಮ್ಮೆ ಕೀಟಗಳು ಹಾಗೂ ಸಣ್ಣ ಪ್ರಾಣಿಗಳನ್ನೂ ಸೇವಿಸುತ್ತವೆ. ಗಿಳಿಗಳು ಸಾಮಾನ್ಯವಾಗಿ ಮರಗಳ ಪೊಟರೆಗಳಲ್ಲಿ ಗೂಡು ನಿರ್ಮಿಸಿ ಸಂತಾನೋತ್ಪತ್ತಿ ನಡೆಸುತ್ತವೆ ಈ ಸಂದರ್ಭದಲ್ಲಿ ಹೆಣ್ಣು ಗಿಳಿಯು ಮೊಟ್ಟೆಗಳಿಗೆ ಕಾವು ನೀಡುತ್ತಿದ್ದು ಗಂಡು ಗಿಳಿಯು ಆಹಾರ ತಂದುಕೊಟ್ಟು ಸಹಕರಿಸುತ್ತದೆ. ಮೊಟ್ಟೆಗಳಿಂದ ಹೊರಬರುವ ಮರಿಗಳು ಆರಂಭದಲ್ಲಿ ಸಂಪೂರ್ಣ ಅಸಹಾಯಕವಾಗಿದ್ದು ಕೆಲವು ವಾರಗಳ ಕಾಲ ಗೂಡಿನಲ್ಲಿಯೇ ಬೆಳೆಯುತ್ತವೆ. ಗಿಳಿಗಳು ಅತ್ಯಂತ ತೀಕ್ಷ್ಣ ಬುದ್ಧಿಮತ್ತೆ ಹೊಂದಿರುವುದರಿಂದ ಮಾನವರ ಧ್ವನಿಯನ್ನು ಅನುಕರಿಸಿ ಪದಗಳು ಮತ್ತು ಸರಳ ವಾಕ್ಯಗಳನ್ನು ಹೇಳುವ ಸಾಮರ್ಥ್ಯವನ್ನು ಹೊಂದಿವೆ. ಸಣ್ಣ ಗಿಳಿಗಳು ಸಾಮಾನ್ಯವಾಗಿ ಸುಮಾರು 15 ವರ್ಷಗಳವರೆಗೆ ಬದುಕಿದರೆ, ದೊಡ್ಡ ತಳಿಯ ಗಿಳಿಗಳು 50 ರಿಂದ 80 ವರ್ಷಗಳವರೆಗೆ ಜೀವಿಸಬಲ್ಲವು. ತಮ್ಮ ಬಲವಾದ ಕೊಕ್ಕಿನಿಂದ ಹಣ್ಣುಗಳನ್ನು ತಿನ್ನುವುದರ ಜೊತೆಗೆ ಮರ ಹತ್ತುವಾಗ ಸಹ ಸಹಾಯ ಪಡೆಯುತ್ತವೆ. ಪ್ರಕೃತಿಯಲ್ಲಿ ಬೀಜಗಳನ್ನು ಹರಡುವ ಮೂಲಕ ಕಾಡುಗಳ ಬೆಳವಣಿಗೆಗೆ ಸಹಕಾರ ನೀಡುವ ಗಿಳಿಗಳು ಮಾನವನಿಗೆ ಪ್ರಿಯವಾದ ಸಾಕುಪಕ್ಷಿಗಳಾಗಿದ್ದರೂ, ಬೇಟೆ, ವ್ಯಾಪಾರಕ್ಕಾಗಿ ಹಿಡಿಯುವಿಕೆ ಮತ್ತು ಅರಣ್ಯ ನಾಶದಂತಹ ಕಾರಣಗಳಿಂದ ಕಾಡಿನ ಗಿಳಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಅವುಗಳ ಸಂರಕ್ಷಣೆ ಅಗತ್ಯವಾಗಿದೆ.






