
ಬೆಂಗಳೂರು: ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (KMDC) 2013–14 ರಿಂದ 2018–19ರ ಅವಧಿಯಲ್ಲಿ ನೀಡಿದ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿ ‘ಒನ್ ಟೈಮ್ ಸೆಟ್ಲ್ಮೆಂಟ್’ (OTS) ಯೋಜನೆ ಜಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಅವಧಿಯಲ್ಲಿ 981 ಕೋಟಿ ರೂ. ಮೂಲ ಸಾಲ ನೀಡಲಾಗಿದ್ದು, ಇದರಲ್ಲಿ ಕೇವಲ 98.18 ಕೋಟಿ ರೂ. ಮಾತ್ರ ವಸೂಲಾಗಿದ್ದು, ಇನ್ನೂ 714.13 ಕೋಟಿ ರೂ. ಬಾಕಿ ಉಳಿದಿದೆ. ಹೊಸ ಯೋಜನೆಯಡಿ ಸುಮಾರು 1.94 ಲಕ್ಷ ಫಲಾನುಭವಿಗಳು ಬಡ್ಡಿ ಸಂಪೂರ್ಣ ಮನ್ನಾದೊಂದಿಗೆ ಕೇವಲ ಮೂಲಧನವನ್ನು ಮರುಪಾವತಿಸಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ. ಆದರೆ ವಿಪಕ್ಷಗಳು ಈ ನಿರ್ಧಾರವನ್ನು ತುಷ್ಟೀಕರಣ ರಾಜಕಾರಣ ಎಂದು ಆರೋಪಿಸಿ, ಇತರ ನಿಗಮಗಳ ಫಲಾನುಭವಿಗಳನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ಕಿಡಿಕಾರಿವೆ. ಹಣಕಾಸು ಇಲಾಖೆ ಕೂಡ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು, ಇಂತಹ ಸೌಲಭ್ಯಗಳು ಸರ್ಕಾರದ ಆದಾಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಇದಕ್ಕೆ ಪ್ರತಿಯಾಗಿ KMDC, ಒಟಿಎಸ್ ಜಾರಿಯಿಂದ ಕನಿಷ್ಠ 150 ಕೋಟಿ ರೂ. ವಸೂಲಿಯಾಗುವ ವಿಶ್ವಾಸ ವ್ಯಕ್ತಪಡಿಸಿ, ಸಂಪೂರ್ಣ ಸಾಲ ಬಾಕಿಯಾಗಿರುವುದಕ್ಕಿಂತ ಮೂಲಧನ ವಸೂಲಿ ಉತ್ತಮವೆಂದು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.




