ಶೃಂಗೇರಿ: ಇತ್ತೀಚೆಗೆ ಶೃಂಗೇರಿ ಶಾರದಾ ಪೀಠಕ್ಕೆ ಆಗಮಿಸಿದ ಕಿರುತೆರೆ ಕಲಾವಿದೆ ಪಲ್ಲವಿ ಮತ್ತಿಗಟ್ಟ ಶೃಂಗೇರಿ ಶ್ರೀ ಗಳ ಬೇಟಿ ಕುರಿತ ವಿವಾದಾತ್ಮಕ ಸುದ್ದಿಯನ್ನು ಮಾಧ್ಯಮವೊಂದು ಪ್ರಕಟಿಸಿತ್ತು. ಆ ಸುದ್ದಿ ಜಗದ್ಗುರುಗಳ ಕುರಿತು ಅಪಪ್ರಚಾರ ಮಾಡುವ ಹುನ್ನಾರ ಎಂದು ಭಕ್ತಾಧಿಗಳಿಗೆ ಅರಿವಾಗಿತ್ತು. ಆದರೂ ಶ್ರೀ ಮಠ ಇಂತಹ ಸುಳ್ಳು ಸುದ್ದಿಗಳ ಕುರಿತು ಕಾನೂನು ಕ್ರಮದ ಎಚ್ಚರಿಕೆ ನೀಡಿತ್ತು. ಇದೀಗ ಸ್ವತಃ ಪಲ್ಲವಿ ಮತ್ತಿಗಟ್ಟರವರು ಫೇಸ್ ಬುಕ್ ನಲ್ಲಿ ಈ ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅವರ ಸ್ಪಷ್ಟನೆ ಹೀಗಿದೆ.
ಮೊದಲನೆಯದಾಗಿ ನಾನು ಎಲ್ಲಿ ಬೇಕಾದರೂ ಓಡಾಡುವ ಸ್ವತಂತ್ರವನ್ನು ಹೊಂದಿದ್ದೇನೆ.. ಯಾಕೆಂದರೆ ನಾನು ಯಾವುದೇ ಅಪರಾಧ ಎಸಗಿ ಬಂಧಿಯಾಗಿರುವ ಖೈದಿಯಲ್ಲ. ಇನ್ನು ಎರಡನೆಯದಾಗಿ ನನ್ನನ್ನು ಖ್ಯಾತ ಕಿರುತೆರೆಯ ನಟಿ ಎಂದು ಉಲ್ಲೆಖಿಸಿ ಬರೆದಿದ್ದಾರೆ.. ನಾನು ಕಿರುತೆರೆಯಿಂದ ದೂರಾಗಿ ನಾಲ್ಕಾರು ವರ್ಷಗಳೇ ಕಳೆದು ಹೋಗಿವೆ. ಈ ವಿಚಾರವನ್ನೂ ತಿಳಿಯದ ಅಲ್ಪಮತಿಗಳು ಒದಗಿಸುವ ಮಹತ್ವವಲ್ಲದ ಸುದ್ದಿಗಳನ್ನೂ ಪ್ರಕಟಿಸುವ ದೌರ್ಭಾಗ್ಯ ಅಥವಾ ಅನಿವಾರ್ಯತೆ ಇಂತಹ ದೊಡ್ಡ ಪತ್ರಿಕೆಗಿದೆ ಎನ್ನುವುದೇ ಬಹಳ ಬೇಸರದ ವಿಚಾರ. ಸ್ವಲ್ಪ ದಿನಗಳ ಹಿಂದೆ ಕುಟುಂಬ ಹಾಗೂ ಹಿತೈಷಿಗಳ ಜೊತೆಗೂಡಿ ಶೃಂಗೇರಿಯೂ ಸೇರಿದಂತೆ ಹೊರನಾಡು, ಕೊಲ್ಲೂರು, ಕಟೀಲು, ಕುಕ್ಕೆ, ಧರ್ಮಸ್ಥಳ, ಪೊಳಲಿ, ಕಮಲಶಿಲೆ, ಸೌತಡ್ಕ, ಮಾರಣಕಟ್ಟೆ, ಹಟ್ಟಿಯಂಗಡಿ, ಆನೆಗುಡ್ಡ ಇನ್ನೂ ಮೊದಲಾದ 20 ಕ್ಕೂ ಅಧಿಕ ಪುಣ್ಯ ಕ್ಷೇತ್ರಗಳಿಗೆ ಭೇಟಿ ಕೊಟ್ಟು ಹಿಂದಿರುಗಿದ್ದು ಸತ್ಯವಾದ ವಿಚಾರ. ಪವಿತ್ರ ಹಿಂದೂ ಧರ್ಮದಲ್ಲಿ ಹುಟ್ಟಿರುವ ನಾನು ತಾಯಿ ಶಾರದಾಂಬೆಯ ದರ್ಶನಕ್ಕಾಗಿ ಶೃಂಗೇರಿಗೆ ಹೋಗಿದ್ದೆನೆ ಹೊರತು ಬೇರೆ ಇನ್ಯಾವ ವಿಶೇಷ ಕಾರಣಗಳಿಲ್ಲ. ಆದರೆ ಪತ್ರಿಕೆ ಉಲ್ಲೆಖಿಸಿದಂತೆ ಶೃಂಗೇರಿಯಲ್ಲಿ ಗಂಟೆಗಳ ಕಾಲ ಶ್ರೀಗಳ ಜೊತೆ ಚರ್ಚಿಸಿದ್ದೆನೆ ಎನ್ನುವ ಮಾತು ಸತ್ಯಕ್ಕೆ ದೂರವಾದ ಮಾತು… ಜಗದ್ಗುರುಗಳ ದರ್ಶನವೇ ಮಹಾಭಾಗ್ಯ ಎಂದು ಭಾವಿಸಿ ಎಷ್ಟೋ ಜನರು ಕಾಯುತ್ತಿರುವಾಗ, ನಾನು ಅವರೊಡನೆ ಗಂಟೆಗಳ ಕಾಲ ಚರ್ಚಿಸಿದ್ದೆನೆ ಎಂಬ ಪತ್ರಿಕೆಯ ಮಾತು ಶುದ್ಧ ಸುಳ್ಳು. ಆದರೂ ಅವರ ಈ ಸುಳ್ಳು ಮಾತೇ ಸತ್ಯವಾಗಿ ಮುಂದೊಂದು ದಿನ ಆ ಭಾಗ್ಯ ನನಗೆ ಲಭಿಸಿದರೆ ಖಂಡಿತವಾಗಿಯೂ ನಾ ಧನ್ಯಳು. ಹಾಗೆ ಹೋದ ಸಂದರ್ಭದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ತೆಗೆದ ಭಾವಚಿತ್ರಗಳನ್ನು ನನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿದ್ದೇನೆ ಕೂಡ. ಆದರೆ ಶೃಂಗೇರಿ ಯಲ್ಲಿ ತೆಗೆದ ಫೋಟೋವನ್ನು ಮಾತ್ರ ನನ್ನ ವಾಟ್ಸಾಪ್ ಸ್ಟೇಟಸನಿಂದ ಕದ್ದು, ಅದಕ್ಕೇ ವಿಶೇಷ ಮಹತ್ವ ನೀಡಿ, ತಮಗೆ ಬೇಕಾದಂತೆ ಕಲ್ಪಿಸಿಕೊಂಡು ಮನಸಿಗೆ ಬಂದಂತೆ ಬರೆದವರ.. ಹಾಗೂ ಅದಕ್ಕೆ ತಮ್ಮದೇ ದೃಷ್ಟಿಕೋನದಲ್ಲಿ ಬಣ್ಣ ಬಳಿದು ಕಮೆಂಟಿಸಿ ಅನಗತ್ಯ ಪ್ರಚಾರ ಮಾಡಿದ ಬಾಲಿಶ ಮನಸ್ಥಿತಿ ಗಳ ಬಗ್ಗೆ ವಿಷಾದಿಸುತ್ತೇನೆ. ಉಳಿದ ಕ್ಷೇತ್ರಗಳಿಗೆ ಭೇಟಿ ಕೊಟ್ಟ ವಿಚಾರ ವಿಶೇಷ ಅನಿಸದೇ ಕೇವಲ ಶೃಂಗೇರಿ ದರ್ಶನಕ್ಕೆ ಇಷ್ಟೊಂದು ಪ್ರಚಾರ ನೀಡಿರುವ ಪತ್ರಿಕೆ ಯಾವುದೋ ಪೂರ್ವಾಗ್ರಹದ ಉದ್ದೇಶ ಹೊಂದಿರುವಂತೆ ಅನಿಸುತ್ತಿದೆ. ಯಾವುದೇ ಧ್ಯೇಯ ಆದರ್ಶಗಳಿಗೆ ನಿಷ್ಠೆ ಇಲ್ಲದ ಪತ್ರಿಕೆಯ ಈ ಉದ್ಯಮ ನೀತಿ ನಿಜವಾಗಿಯೂ ದುರದೃಷ್ಟಕರ. ಪತ್ರಿಕೆಗಳು ಬೆಳಕು ಬೀರಬೇಕಾದ ಅನೇಕ ವಿಚಾರಗಳಿವೆ.. ಸಾಮಾಜಿಕ ಬದ್ಧತೆಯಿಂದ ಅವುಗಳತ್ತ ಗಮನ ನೀಡಿ ಸತ್ಯ ನಿಷ್ಠವಾದ ಶ್ರೇಷ್ಠ ಪತ್ರಿಕೆಗಳ ಸಾಲಿನಲ್ಲಿ ಈ ಪತ್ರಿಕೆಯೂ ಬೆಳೆದು ನಿಲ್ಲಲಿ ಎಂಬುದೇ ನನ್ನ ಸದಾಶಯ.
