ಶೃಂಗೇರಿ : ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಕಾಡಾನೆ ದಾಳಿಗೆ ಇಬ್ಬರು ರೈತರು ಮೃತಪಟ್ಟಿದ್ದು, ಆ ವಿಷಯ ಮಾಸುವ ಮುನ್ನವೇ ಕೆರೆಕಟ್ಟೆಯ ಭಲೇಕಡಿ ಗ್ರಾಮದ ಹುಲುಗಾರು ಬೈಲು ಎಂಬ ಸ್ಥಳದಲ್ಲಿ ಇಂದು ಮತ್ತೆ ಕಾಡಾನೆಯೊಂದು ಪ್ರತ್ಯಕ್ಷವಾಗಿದ್ದು, ದಾರಿಯುದ್ದಕ್ಕೂ ಉಪಟಳ ಮಾಡಿ ವಿದ್ಯುತ್ ಕಂಬವೊಂದನ್ನು ಉರುಳಿಸಿ ಹೋಗಿದೆ ಎಂಬುವುದಾಗಿ ತಿಳಿದು ಬಂದಿರುತ್ತದೆ. ಇದರಿಂದ ಅಲ್ಲಿನ ಸ್ಥಳೀಯರಲ್ಲಿ ಮತ್ತೆ ಆತಂಕ ಮನೆ ಮಾಡಿದ್ದು, ಆನೆಯ ಉಪಟಳ ಒಂದೆಡೆಯಾದರೆ ಕೆರೆಕಟ್ಟೆ ನರ್ಸರಿಯ ಹತ್ತಿರ ಸಭಾಭವನದ ಮುಂದೆ ಇಂದು ಬೆಳಿಗ್ಗೆ 8.30ರ ವೇಳೆಗೆ ಚಿರತೆಯು ಕಂಡುಬಂದಿದ್ದು ಅಲ್ಲಿನ ಎಲ್ಲಾ ಗ್ರಾಮಸ್ಥರು ಅತ್ಯಂತ ಎಚ್ಚರಿಕೆಯಿಂದ ಒಡಾಡಬೇಕೆಂದು ವಿನಂತಿಸಲಾಗಿದೆ. ಸದ್ಯಕ್ಕೆ ಕಾಡಾನೆಗೆ ಹೆದರಿರುವ ಗ್ರಾಮಸ್ಥರು ಇನ್ನು ಚಿರತೆಗೂ ಹೆದರಿ ದುಪ್ಪಟ್ಟು ಜಾಗ್ರತೆಯಿಂದ ಓಡಾಡಬೇಕಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ.
