
ಶೃಂಗೇರಿ: ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ವೆಬ್ಸೈಟ್ ಸೃಷ್ಟಿಸಿ, ಹೋಮ ನಡೆಸುವುದಾಗಿ ನಂಬಿಸಿ ಭಕ್ತಾದಿಗಳಿಂದ ಹಣ ವಸೂಲಿ ಮಾಡಿರುವ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈಶ್ವರ ಎಂ.ಬಿ. ಎಂಬ ವ್ಯಕ್ತಿ ಶೃಂಗೇರಿ ಮಠದ ಅಧಿಕೃತ ವೆಬ್ಸೈಟ್ನಲ್ಲಿರುವ ಫೋಟೋ ಹಾಗೂ ಲೋಗೋವನ್ನು ಬಳಸಿಕೊಂಡು “endowmentcommissioner.com” ಎಂಬ ನಕಲಿ ವೆಬ್ಸೈಟ್ ಸೃಷ್ಟಿಸಿದ್ದಾನೆ ಎನ್ನಲಾಗಿದೆ. ಈ ವೆಬ್ಸೈಟ್ ಮೂಲಕ ಶ್ರೀ ಮಠದ ವತಿಯಿಂದ ಹೋಮಗಳನ್ನು ನಡೆಸಲಾಗುತ್ತದೆ ಎಂದು ನಂಬಿಸಿ, 8618428706 ಮೊಬೈಲ್ ಸಂಖ್ಯೆಗೆ ಹಣ ವರ್ಗಾಯಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೆಪ್ಟೆಂಬರ್ 20ರಂದು ಈ ವಿಚಾರ ಮಠದ ಗಮನಕ್ಕೆ ಬಂದಿದ್ದು, ವಿಜಯ್ ಮುದೋಳೆ ಎಂಬ ಭಕ್ತರಿಂದ ಹಣ ವಸೂಲಿ ಮಾಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಜೂನ್ 1ರಿಂದಲೇ ಇದೇ ರೀತಿಯಲ್ಲಿ ಭಕ್ತಾದಿಗಳಿಗೆ ವಂಚನೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ ಎನ್ನಲಾಗಿದೆ. ಇನ್ನು ಈ ನಕಲಿ ವೆಬ್ಸೈಟ್ಗೂ ಶೃಂಗೇರಿ ಶ್ರೀ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಠದ ವತಿಯಿಂದ ಸ್ಪಷ್ಟಪಡಿಸಲಾಗಿದೆ. ಭಕ್ತಾದಿಗಳಿಗೆ ಆಗುತ್ತಿರುವ ವಂಚನೆಯನ್ನು ತಡೆಗಟ್ಟುವಂತೆ ಹಾಗೂ ಮಠದ ಹೆಸರು, ಫೋಟೋ ಮತ್ತು ಲೋಗೋ ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಂಜನ್ ಟಿ.ಎಂ. ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




