ಚಿಕ್ಕಮಗಳೂರು: ಮೂಡಿಗೆರೆ ಭಾಗಕ್ಕೆ ಕಾಡಾನೆಗಳನ್ನು ಅಟ್ಟುತ್ತಿರುವ ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಇದೀಗ ವಿಧಾನಸೌಧದತ್ತ ಆಗಮಿಸಿದ್ದಾರೆ. ಕೈಯಲ್ಲಿ ರಾಜೀನಾಮೆ ಪತ್ರ ಹಿಡಿದು ವಿಧಾನಸೌಧದ ಸಭಾಪತಿ ಕಚೇರಿಗೆ ಬಂದಿರುವ ಶಾಸಕಿ ನಯನ ಮೋಟಮ್ಮ ಅವರ ನಡೆ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮೂಡಿಗೆರೆ ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿರುವ ನಡುವೆಯೇ, ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಸರ್ಕಾರದ ಕ್ರಮಕ್ಕೆ ಶಾಸಕಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, “ಸರ್ಕಾರದಿಂದ ನಾವಲ್ಲ , ಜನರಿಂದ ಸರ್ಕಾರ” ಎಂಬ ಸಂದೇಶದೊಂದಿಗೆ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಜನರ ಹಿತಾಸಕ್ತಿಗೆ ವಿರುದ್ಧವಾಗಿ ನಿರ್ಧಾರ ಕೈಗೊಂಡರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗುಡುಗಿದ್ದರು. ಇದೀಗ ಕೈಯಲ್ಲಿ ರಾಜೀನಾಮೆ ಪತ್ರ ಹಿಡಿದು ಸಭಾಪತಿ ಕಚೇರಿಗೆ ಆಗಮಿಸಿರುವ ನಯನ ಮೋಟಮ್ಮ ಅವರ ನಡೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
