
ಆಗುಂಬೆ: ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಸಂಪರ್ಕ ಸೇತುವೆಯಾಗಿರುವ ರಾಷ್ಟ್ರೀಯ ಹೆದ್ದಾರಿ 169Aರ ಆಗುಂಬೆ ಘಾಟ್ ಮತ್ತು ಪರ್ಕಳ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ₹42.75 ಕೋಟಿ ಅನುದಾನ ಬಿಡುಗಡೆಯಾಗಿದೆ. ಆಗುಂಬೆ ಘಾಟ್ನ ಆಯ್ದ ಭಾಗಗಳಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಸೇರಿದಂತೆ ಆಗುಂಬೆಯಿಂದ ಹೆಬ್ರಿ ಪೇಟೆವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಪರ್ಕಳದಿಂದ ಕರಾವಳಿ ಜಂಕ್ಷನ್ವರೆಗೆ ಆಯ್ದ ಭಾಗಗಳಲ್ಲೂ ರಸ್ತೆ ಅಭಿವೃದ್ಧಿ ನಡೆಯಲಿದೆ. ಆಗುಂಬೆ ಘಾಟ್ ರಸ್ತೆಯ ಅಭಿವೃದ್ಧಿ ಸೇರಿದಂತೆ ಕೆಲವೊಂದು ತಿರುವುಗಳಲ್ಲಿ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ವತಿಯಿಂದ ₹42.75 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದೆ.




