
ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿ ವಿರೋಧಿಸಿ ಮಲೆನಾಡಿಗರು ಬದುಕಿಗಾಗಿ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದು, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣ ಅಕ್ಷರಶಃ ಸ್ಥಬ್ಧಗೊಂಡಿತ್ತು. ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಬಾಳೆಹೊನ್ನೂರು ಬಂದ್ಗೆ ವರ್ತಕರು ಹಾಗೂ ಗ್ರಾಹಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಬಾಳೆಹೊನ್ನೂರು ಹೋಬಳಿ ಕೇಂದ್ರದ ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕುಗಳಿಂದ ಸಾವಿರಾರು ರೈತರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಕಸ್ತೂರಿ ರಂಗನ್ ವರದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆಯುದ್ದಕ್ಕೂ ವರದಿ ವಿರೋಧಿ ಘೋಷಣೆಗಳು ಮೊಳಗಿದ್ದು, ಕಸ್ತೂರಿ ರಂಗನ್ ವರದಿ ಮಲೆನಾಡಿಗರ ಬದುಕಿಗೆ ಮರಣ ಶಾಸನವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಯಾವುದೇ ಕಾರಣಕ್ಕೂ ವರದಿಯನ್ನು ಜಾರಿಗೆ ತರಲು ಅವಕಾಶ ನೀಡಬಾರದು, ರೈತರು ಕೂಡ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಪರಿಸರವಾದಿಗಳ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಬಾಳೆಹೊನ್ನೂರಿನ ಮುಖ್ಯ ರಸ್ತೆಯಲ್ಲಿ ಘೋಷಣೆಗಳನ್ನು ಮೊಳಗಿಸಿದರು.
ವರದಿ: ಸಂತೋಷ್ ಅತ್ತಿಗೆರೆ




