
ಚಾಮರಾಜನಗರ: ಆರು ದಶಕಗಳಿಂದ ಕನ್ನಡ ನೆಲ, ಜಲ, ಭಾಷೆ, ಕಲೆ, ಸಾಹಿತ್ಯ ಹಾಗೂ ಚಿತ್ರರಂಗದ ಉಳಿವಿಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಕನ್ನಡ ಚಳುವಳಿಯ ನಾಯಕ ವಾಟಾಳ್ ನಾಗರಾಜ್ ಅವರು ವಿಶ್ವದ ಶ್ರೇಷ್ಠ ಹೋರಾಟಗಾರರಾಗಿದ್ದು, ಅವರ ಕೊಡುಗೆಗೆ ಕರ್ನಾಟಕದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಬೇಕು ಎಂದು ಸಂಸ್ಕೃತಿ ಚಿಂತಕ ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್. ಋಗ್ವೇದಿ ತಿಳಿಸಿದ್ದಾರೆ. ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ‘ಕನ್ನಡ ಚಳುವಳಿ, ವಾಟಾಳರ ಕೊಡುಗೆ ಹಾಗೂ ವಾಟಾಳ್ ನಾಗರಾಜರ ಜನ್ಮದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾಟಾಳ್ ನಾಗರಾಜ್ ಅವರು 10 ಸಾವಿರಕ್ಕೂ ಹೆಚ್ಚು ಹೋರಾಟಗಳನ್ನು ನಡೆಸಿ, 400ಕ್ಕೂ ಹೆಚ್ಚು ಬಂದ್ಗಳಿಗೆ ಕರೆ ನೀಡುವ ಮೂಲಕ ಕನ್ನಡಿಗರಲ್ಲಿ ಹೋರಾಟದ ಶಕ್ತಿ ತುಂಬಿದ್ದಾರೆ ಎಂದರು. ಇದೇ ವೇಳೆ ವಿವಿಧ ಗಣ್ಯರು ಮಾತನಾಡಿ, ಮೂರು ಬಾರಿ ಚಾಮರಾಜನಗರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ವಾಟಾಳ್ ನಾಗರಾಜ್ ಅವರು ಚಾಮರಾಜನಗರ ಜಿಲ್ಲೆ ರಚನೆ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳದೆ 60 ವರ್ಷಗಳಿಂದ ಸ್ವತಂತ್ರವಾಗಿ ಕನ್ನಡದ ಪರ ಹೋರಾಟ ನಡೆಸುತ್ತಿರುವ ವಾಟಾಳ್ ನಾಗರಾಜ್ ಅವರಿಗೆ ವಾಟಾಳರೇ ಸಾಟಿ ಎಂದು ಕನ್ನಡ ಚಳುವಳಿಯ ನಾಯಕರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ತಮಿಳು ಸಂಘದ ಅಧ್ಯಕ್ಷ ಜಗದೀಶನ್, ಜನಪದ ಗಾಯಕ ಸುರೇಶ್ ನಾಗ್ ಹರದನಹಳ್ಳಿ, ಶ್ರೀನಿವಾಸ್ ಗೌಡ, ಶಿವಲಿಂಗಮೂರ್ತಿ, ರವಿಚಂದ್ರ ಪ್ರಸಾದ್ ಕಹಳೆ, ಬಿ.ಕೆ. ಆರಾಧ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.




