
ಬಾಳೆಹೊನ್ನೂರು: ಸರ್ಕಾರಿ ಕಾಡಿನಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿ, ₹5,170 ನಗದು ಸೇರಿದಂತೆ ಜೂಜಾಟಕ್ಕೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಆಗಸ್ಟ್ 28ರಂದು ಸಂಜೆ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಡವಂತಿ ಗ್ರಾಮದ ಬಾಸಾಪುರದ ಸರ್ಕಾರಿ ಕಾಡಿನಲ್ಲಿ 7ರಿಂದ 8 ಮಂದಿ ಹಣವನ್ನು ಪಣಕ್ಕಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಮಾಹಿತಿ ಆಧರಿಸಿ ಪೊಲೀಸರು ಪಂಚರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಸುಮಾರು 10ರಿಂದ 11 ಮಂದಿ ಪ್ಲಾಸ್ಟಿಕ್ ಟರ್ಪಲ್ ಮೇಲೆ ಕುಳಿತು ಇಸ್ಪೀಟ್ ಜೂಜಾಟ ನಡೆಸುತ್ತಿರುವುದು ಕಂಡುಬಂದಿದೆ. ಪೊಲೀಸರು ದಾಳಿ ನಡೆಸುತ್ತಿದ್ದಂತೆ ಕೆಲವರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಇಬ್ಬರನ್ನು ಪೊಲೀಸರು ಹಿಡಿದಿದ್ದಾರೆ. ಬಂಧಿತರನ್ನು ಮೂಡಿಗೆರೆ ತಾಲೂಕಿನ ಹೊಸಂಪುರ ಕೂವೆ ಗ್ರಾಮದ ದಿನೇಶ್ ಹಾಗೂ ಚಿಕ್ಕಮಗಳೂರು ತಾಲೂಕಿನ ಬೊಗಸೆ ಗ್ರಾಮದ ಚಿದಾನಂದ ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ₹5,170 ನಗದು, 52 ಇಸ್ಪೀಟ್ ಎಲೆಗಳು, ನೀಲಿ ಬಣ್ಣದ ಪ್ಲಾಸ್ಟಿಕ್ ಟರ್ಪಲ್ ಹಾಗೂ ಒಂದು ಟಾರ್ಚ್ ಪತ್ತೆಯಾಗಿವೆ. ಯಾವುದೇ ಪರವಾನಗಿ ಇಲ್ಲದೆ ಜೂಜಾಟ ನಡೆಸುತ್ತಿದ್ದ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.




