
ಚಿಕ್ಕಮಗಳೂರು: ಸರ್ಕಾರಿ ಶಾಲೆಯೊಳಗೆ ಶಿಕ್ಷಕನ ಕುಟುಂಬದ ಗಲಾಟೆಯಿಂದ ಮಕ್ಕಳು ಹಾಗೂ ಶಿಕ್ಷಕರು ಕಿರಿಕಿರಿ ಅನುಭವಿಸುತ್ತಿರುವ ಆರೋಪ ಕೊಪ್ಪ ತಾಲೂಕಿನ ಕಲ್ಲುಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇಳಿಬಂದಿದೆ. ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ನಾಯ್ಕ್ ಮತ್ತು ಅವರ ಪತ್ನಿ ಸುಶೀಲಾ ನಡುವೆ ನಡೆಯುತ್ತಿರುವ ಕೌಟುಂಬಿಕ ಕಲಹದಿಂದ ಶಾಲೆಯ ವಾತಾವರಣಕ್ಕೆ ತೊಂದರೆಯಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಮೂಲತಃ ಬಳ್ಳಾರಿ ಜಿಲ್ಲೆಯವರಾದ ರಮೇಶ್ ನಾಯ್ಕ್ ಅವರು ಸುಮಾರು ಆರು ತಿಂಗಳ ಹಿಂದೆ ಕಲ್ಲುಗುಡ್ಡೆ ಶಾಲೆಗೆ ವರ್ಗಾವಣೆಯಾಗಿದ್ದು, ಊರಿನಲ್ಲೇ ಉಳಿಯಲು ಗ್ರಾಮಸ್ಥರು ಶಾಲೆಯ ಸಮೀಪ ಬಾಡಿಗೆ ಮನೆಯನ್ನು ವ್ಯವಸ್ಥೆ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಆದರೆ ಶಿಕ್ಷಕರ ಪತ್ನಿ ನಿತ್ಯವೂ ತಮ್ಮ ಮಗುವಿನೊಂದಿಗೆ ಶಾಲೆಗೆ ಬಂದು ಗಲಾಟೆ ಮಾಡುತ್ತಿದ್ದು, ಮುಖ್ಯಶಿಕ್ಷಕರು ಹಾಗೂ ಇತರ ಶಿಕ್ಷಕರೊಂದಿಗೆ ವಾಗ್ವಾದ ನಡೆಸುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಶಾಲೆಯೊಳಗೆ ಬಂದು ಗಲಾಟೆ ಮಾಡದಂತೆ ಸೂಚನೆ ನೀಡಿದ್ದರೂ ಮಾತು ಕೇಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಹಿಂದೆ ಹಲವು ಬಾರಿ ರಮೇಶ್ ನಾಯ್ಕ್ ಮತ್ತು ಸುಶೀಲಾ ಅವರ ನಡುವೆ ಗ್ರಾಮಸ್ಥರು ರಾಜಿ ಪಂಚಾಯಿತಿ ನಡೆಸಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎನ್ನಲಾಗಿದೆ. ಇದೇ ವೇಳೆ ಶಿಕ್ಷಕ ರಮೇಶ್ ನಾಯ್ಕ್ ಅವರು ಮಕ್ಕಳಿಗೆ ಸರಿಯಾಗಿ ಪಾಠ ಮಾಡದೆ ಕರ್ತವ್ಯಲೋಪ ಎಸಗುತ್ತಿದ್ದಾರೆ, ಇತರ ಶಿಕ್ಷಕರು ಹಾಗೂ ಮುಖ್ಯಶಿಕ್ಷಕರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುತ್ತಿದ್ದಾರೆ ಮತ್ತು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪಗಳನ್ನೂ ಪೋಷಕರು ಮಾಡಿದ್ದಾರೆ. ಈ ಕುರಿತು ಇಲಾಖಾಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪರಿಣಾಮಕಾರಿ ಕ್ರಮವಾಗಿಲ್ಲ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲೆಯ ಶೈಕ್ಷಣಿಕ ವಾತಾವರಣ ಹಾಗೂ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಶಿಕ್ಷಕ ರಮೇಶ್ ನಾಯ್ಕ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಪೋಷಕರು ಒತ್ತಾಯಿಸಿದ್ದು, ಕ್ರಮ ಕೈಗೊಳ್ಳದಿದ್ದರೆ ಬಿಇಒ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.




