ಬೆಂಗಳೂರು: ಮಲ್ಲಸಂದ್ರ ಮತ್ತು ಗುಬ್ಬಿ ರೈಲ್ವೆ ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಅತ್ಯಗತ್ಯ ಇಂಜಿನಿಯರಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಶಿವಮೊಗ್ಗ, ತಾಳಗುಪ್ಪ ಹಾಗೂ ಚಿಕ್ಕಮಗಳೂರು ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಆಗಸ್ಟ್ 19, 22, 23 ಮತ್ತು 26ರಂದು ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದ್ದು, ಕೆಲವು ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಹಾಗೂ ಇನ್ನು ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (20652) ರೈಲು ಆಗಸ್ಟ್ 19, 22, 23 ಮತ್ತು 26ರಂದು ಅರಸೀಕೆರೆ–ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದ್ದು, ಅರಸೀಕೆರೆಯಲ್ಲಿಯೇ ಪ್ರಯಾಣ ಮುಕ್ತಾಯಗೊಳ್ಳಲಿದೆ. ಆಗಸ್ಟ್ 19 ಮತ್ತು 26ರಂದು ಚಿಕ್ಕಮಗಳೂರು–ಯಶವಂತಪುರ (16239), ಯಶವಂತಪುರ–ಚಿಕ್ಕಮಗಳೂರು (16240), ಕೆಎಸ್ಆರ್ ಬೆಂಗಳೂರು–ಮೈಸೂರು ಒಡೆಯರ್ (12614), ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು (66567) ಹಾಗೂ ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು (66572) ರೈಲುಗಳ ಸಂಚಾರ ಸಂಪೂರ್ಣ ರದ್ದಾಗಲಿದೆ. ಅದೇ ರೀತಿ ಆಗಸ್ಟ್ 19, 22 ಮತ್ತು 26ರಂದು ಯಲಹಂಕ–ಅರಸೀಕೆರೆ (66505) ಹಾಗೂ ಅರಸೀಕೆರೆ–ಯಲಹಂಕ (66506) ಮೆಮು ರೈಲುಗಳ ಸಂಚಾರವೂ ರದ್ದಾಗಲಿದೆ. ಯಶವಂತಪುರ–ಶಿವಮೊಗ್ಗ ಟೌನ್ ಇಂಟರ್ಸಿಟಿ ಎಕ್ಸ್ಪ್ರೆಸ್ (20689) ರೈಲು ಆಗಸ್ಟ್ 19, 22, 23 ಮತ್ತು 26ರಂದು ಚಿಕ್ಕಬಾಣಾವರ, ನೆಲಮಂಗಲ, ಹಾಸನ ಹಾಗೂ ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದ್ದು, ಈ ದಿನಗಳಲ್ಲಿ ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ. ಇದರ ಜೊತೆಗೆ ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್ಪ್ರೆಸ್ (17310) ಹಾಗೂ ಮೈಸೂರು–ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್ (20676) ರೈಲುಗಳೂ ತಿಪಟೂರು ಮತ್ತು ತುಮಕೂರು ಬದಲಿಗೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿವೆ. ಹೀಗಾಗಿ ಆಗಸ್ಟ್ 19, 22, 23 ಮತ್ತು 26ರಂದು ರೈಲಿನಲ್ಲಿ ಪ್ರಯಾಣಿಸುವವರು ತಮ್ಮ ರೈಲಿನ ವೇಳಾಪಟ್ಟಿ, ಮಾರ್ಗ ಹಾಗೂ ನಿಲುಗಡೆಗಳ ಮಾಹಿತಿಯನ್ನು ಮುಂಚಿತವಾಗಿ ಪರಿಶೀಲಿಸಿ ಪ್ರಯಾಣಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
