
ಕೊಟ್ಟಿಗೆಹಾರ: 80ನೇ ಸ್ವಾತಂತ್ರೋತ್ಸವದ ಅಂಗವಾಗಿ ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಆಗಸ್ಟ್ 14ರಿಂದ 16ರವರೆಗೆ ವಿಶೇಷ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನು ಸಾರುವ ಅಪರೂಪದ ವಸ್ತುಗಳನ್ನು ಪ್ರದರ್ಶಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ವಿಶೇಷ ಅಂಚೆ ಚೀಟಿಗಳು, ತಾಮ್ರಪತ್ರಗಳು, ಪದಕಗಳು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುದ್ರಿಸಿರುವ ಬೆಳ್ಳಿಯ ನಾಣ್ಯಗಳು, ವಂದೇ ಮಾತರಂ 150ನೇ ವರ್ಷಾಚರಣೆಯ ಸ್ಮರಣಾರ್ಥ ನಾಣ್ಯಗಳು ಹಾಗೂ ಜಲಿಯನ್ ವಾಲಾಬಾಗ್ ಶತಮಾನೋತ್ಸವದ ನೆನಪಿನ ವಿಶೇಷ ನಾಣ್ಯಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ. ಇದರ ಜೊತೆಗೆ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಡಾ. ಬಿ.ಆರ್. ಅಂಬೇಡ್ಕರ್, ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್ ಹಾಗೂ ಭಗತ್ ಸಿಂಗ್ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರನ್ನು ಕುರಿತ ಶತಮಾನೋತ್ಸವದ ಸ್ಮರಣಾರ್ಥ ನಾಣ್ಯಗಳು ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಕನ್ನಡ ಹಾಗೂ ಇಂಗ್ಲಿಷ್ ಪುಸ್ತಕಗಳನ್ನೂ ಪ್ರದರ್ಶನದಲ್ಲಿ ವೀಕ್ಷಿಸಬಹುದಾಗಿದೆ. ಸ್ವಾತಂತ್ರ್ಯ ಹೋರಾಟದ ಇತಿಹಾಸ ಹಾಗೂ ಅಪರೂಪದ ಸಂಗ್ರಹಗಳ ಬಗ್ಗೆ ತಿಳಿದುಕೊಳ್ಳಲು ಸಾರ್ವಜನಿಕರಿಗೆ ಈ ಪ್ರದರ್ಶನ ಉತ್ತಮ ಅವಕಾಶವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.




