
ಚಾಮರಾಜನಗರ : ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ನಗರದ ಜೈಹಿಂದ್ ಕಟ್ಟೆಯಲ್ಲಿ ಬಾಲಗಂಗಾಧರ ತಿಲಕ್ ಹಾಗೂ ಚಂದ್ರಶೇಖರ್ ಆಜಾದ್ ರವರ ಜನ್ಮದಿನವನ್ನು ಸರಳವಾಗಿ ಆಚರಿಸಲಾಗಿದ್ದು, ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿದ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಆರ್ಯಭಟಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಬಾಲ ಗಂಗಾಧರ ತಿಲಕ್ ಹಾಗೂ ಚಂದ್ರಶೇಖರ ಆಜಾದ್ ರವರು ಸ್ಪೂರ್ತಿದಾಯಕವಾದ ವೀರ ದೇಶಾಭಿಮಾನವನ್ನು ಭಾರತೀಯರಲ್ಲಿ ಜೀವಂತವಾಗಿ ಉಳಿಸಿದ ಮಹಾನ್ ಸ್ವಾತಂತ್ರ ಹೋರಾಟಗಾರರು. ಬಾಲ ಗಂಗಾಧರ ತಿಲಕ್ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಕಿಲ ಎಂಬ ಗ್ರಾಮದಲ್ಲಿ 1856 ಜುಲೈ 23 ರಂದು ಜನಿಸಿದರು ತಂದೆ ಗಂಗಾಧರ್ ರಾಮಚಂದ್ರ ತಿಲಕ್ ಶಾಲಾ ಅಧ್ಯಾಪಕರಾಗಿದ್ದ ಇವರು ರಾಷ್ಟ್ರಪ್ರೇಮಿಗಳಾಗಿದ್ದರು. ತಿಲಕ್ ರವರು ಪರಮ ದೇಶಾಭಿಮಾನ ಹೊಂದಿದ್ದವರು.ಮರಾಠಿ ಭಾಷೆಯಲ್ಲಿ ಕೇಸರಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮರಾಠ ಎಂಬ ಎರಡು ಪತ್ರಿಕೆಗಳನ್ನು ಹೊರಡಿಸಿ ಜನರಲ್ಲಿ ಸ್ವಾತಂತ್ರ್ಯ ಚಳುವಳಿಯ ಜಾಗೃತಿಯನ್ನು ಉಂಟು ಮಾಡಿದರು. ಸೆರೆಮನೆ ವಾಸವನ್ನು ಅನುಭವಿಸಿದ ತಿಲಕ್ ರವರ ಧೈರ್ಯ ತ್ಯಾಗ ಧಾರ್ಮಿಕ ಮತ್ತು ಸ್ವದೇಶದ ಅಭಿಮಾನ ಸ್ವದೇಶ ಪ್ರೇಮ ಮರೆಯಲಾಗದು. ದೇಶದ ಜನರಲ್ಲಿ ಜಾಗೃತಿ ಉಂಟುಮಾಡಲು ಗಣೇಶ ಉತ್ಸವ, ಶಿವಾಜಿ ಉತ್ಸವಗಳನ್ನು ಆರಂಭಿಸಿ ದೇಶದ ಮೂಲೆ ಮೂಲೆಗಳಲ್ಲೂ ರಾಷ್ಟ್ರ ಪ್ರೇಮವನ್ನು ಮೂಡಿಸಿದವರು. ಇಂದಿಗೂ ಶಿವಾಜಿ ಉತ್ಸವ, ಗಣೇಶ ಉತ್ಸವ ಹಾಗೂ ನೂರಾರು ಉತ್ಸವಗಳು ಜನರಲ್ಲಿ ಸದಾ ಕಾಲ ಇತಿಹಾಸ,ಸಂಸ್ಕೃತಿ, ಪರಂಪರೆ,ವಿಚಾರಧಾರೆಗಳ ಅರಿಯಲು ಸಹಾಯಕವಾಗಿದೆ. ಮಾನವೀಯ ಮೌಲ್ಯದ ಚಿಂತಕರಾಗಿದ್ದ ತಿಲಕರವರು ಮಹಾರಾಷ್ಟ್ರದಲ್ಲಿ ಉಂಟಾದ ಭೀಕರ ಬರಗಾಲ ಹಾಗೂ ಪ್ಲೇಗ್ ಹಾವಳಿಗೆ ಒಳಗಾದ ಜನರಿಗೆ ಅಪಾರ ಸಹಾಯ ಮಾಡುವ ಮೂಲಕ ಸರ್ಕಾರದೊಡನೆ ಹಗಲಿರಲು ಎನ್ನದೆ ಹೋರಾಡಿ ನೊಂದ ಜನರಿಗೆ ಆಪತ್ಬಾಂಧವರಾಗಿ ತಿಲಕ್ ರವರು ಸೇವೆಯನ್ನು ಸಲ್ಲಿಸಿದ್ದಾರೆ. ಸ್ವದೇಶಿ ವಸ್ತುಗಳ ಬಳಕೆ ಚಿಂತನೆಯ ಬಗ್ಗೆ ಅಪಾರವಾದ ಜಾಗೃತಿಯನ್ನು ಮೂಡಿಸಿದವರು. ಸೆರೆಮನೆ ಸೇರಿದ ತಿಲಕ್ ರವರು ಸೆರೆಮನೆಯಲ್ಲಿಯೇ ಗೀತಾ ರಹಸ್ಯವನ್ನು ಬರೆದರು. ದೇಶದ ಇತಿಹಾಸ ಸಂಸ್ಕೃತಿ, ಪರಂಪರೆಯ ಬಗ್ಗೆ ಅಪಾರ ಜ್ಞಾನವನ್ನು ವನ್ನು ಹೊಂದಿದ್ದ ತಿಲಕ್ ರವರ ಚಿಂತನೆ,ಧೈರ್ಯ, ಸಾಹಸ, ಅಪ್ರತಿಮ ವೀರತ್ವ ಮತ್ತು ಅವರ ಸಂಗ್ರಾಮದ ಘೋಷಣೆಯಾದ ಸ್ವರಾಜ್ ನನ್ನ ಜನ್ಮ ಸಿದ್ಧ ಹಕ್ಕು ಅದನ್ನು ನಾನು ಪಡೆದೆ ತೀರುತ್ತೇನೆ ಎಂಬ ಘರ್ಜನೆಯ ಮೂಲಕ ಬ್ರಿಟಿಷರ ಧೈರ್ಯವನ್ನು ಕುಸಿಯುವಂತೆ ಮಾಡಿದವರು. ತಿಲಕ್ ರವರು ಸದಾ ಕಾಲ ಲಕ್ಷಾಂತರ ರಾಷ್ಟ್ರಭಕ್ತರಿಗೆ ಶಕ್ತಿಯಾದವರು. ಲೋಕಮಾನ್ಯ ಎಂದೇ ಹೆಸರಾದ ತಿಲಕ್ ರವರ ಸಾಧನೆ ಮರೆಯಲು ಸಾಧ್ಯವಿಲ್ಲ ಎಂದರು. ಮುಖ್ಯ ಅತಿಥಿಯಾಗಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪತ್ರಿಕಾ ಕಾರ್ಯದರ್ಶಿ ಬಿಕೆ ಆರಾಧ್ಯರವರು ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳಲ್ಲಿ ಚಂದ್ರಶೇಖರ್ ಆಜಾದ್ ಹೆಸರು ಜನಜನಿತ.ಉತ್ತರ ಪ್ರದೇಶದಲ್ಲಿ ತಂದೆ ಪಂಡಿತ್ ರಾಮ್ ತಿವಾರಿ ತಾಯಿ ಜಗರಾಣಿ ದೇವಿ ಕುಟುಂಬದಲ್ಲಿ ಜುಲೈ 23, 1904 ರಲ್ಲಿ ಜನಿಸಿದವರು. ಅಸಹಕಾರ ಚಳುವಳಿಯಲ್ಲಿ ಬಂಧನಕ್ಕೆ ಒಳಗಾಗಿ ಸೆರೆಮನೆ ವಾಸ ಅನುಭವಿಸಿದ ಆಜಾದ್ ರವರು ಹಿಂದುಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕನ್ ಆರ್ಮಿಯ ಸದಸ್ಯರಾಗಿ ರಾಮ್ ಪ್ರಸಾದ್ ಬಿಸ್ಮಿಲ್ ಮಾರ್ಗದರ್ಶನದಲ್ಲಿ ಕ್ರಾಂತಿಕಾರಿ ಚಟುವಟಿಕೆಯಲ್ಲಿ ಪಾಲ್ಗೊಂಡವರು. ಚಂದ್ರಶೇಖರ್ ಆಜಾದ್ ರವರು ಸ್ಯಾಂಡರ್ಸ್ಎಂಬ ಬ್ರಿಟಿಷ್ ಅಧಿಕಾರಿಯ ಮೇಲೆ ದಾಳಿ ಮಾಡಿದ ಪ್ರಮುಖರಾಗಿದ್ದರು. ಚಂದ್ರಶೇಖರ್ ಆಜಾದ್ ಬಂಧನಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ತಾವೇ ಗುಂಡಕ್ಕಿ ಕೊಂಡು ಫೆಬ್ರವರಿ 27, 1931 ರಲ್ಲಿ ಹುತಾತ್ಮರಾದರು ಆಜಾದ್ ಧೈರ್ಯಶಾಲಿ ಯುವ ಕ್ರಾಂತಿಕಾರಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಕಾಶ್, ಬೋಜಪ್ಪ, ಮಂಜುನಾಥ್, ರವಿ, ಸುಂದರ್ ಮುಂತಾದವರು ಉಪಸ್ಥಿತರಿದ್ದರು.




