
ಚಾಮರಾಜನಗರ: ರಾಷ್ಟ್ರಧ್ವಜವು ದೇಶಭಕ್ತಿಯ ಪ್ರತೀಕ. ದೇಶದ ಉಳಿವಿಗಾಗಿ ಬಲಿದಾನವಾಗಲು ಸದಾ ಸಿದ್ಧವಾಗಿರುವ ನಾವುಗಳು ಅದರ ಮೇಲಿರುವ ಭಕ್ತಿಯಿಂದಲೇ ರಾಷ್ಟ್ರವನ್ನು ಸದಾ ಕಾಲ ಸಂರಕ್ಷಿಸಿ ಗೌರವದಿಂದ ಕಾಪಾಡುವ ಕಾರ್ಯವನ್ನು ಭಾರತೀಯರು ಸದಾ ನಿರ್ವಹಿಸುತ್ತಿದ್ದಾರೆ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯುತ್ ಕ್ಲಬ್ ಹಮ್ಮಿಕೊಂಡಿದ್ದ ರಾಷ್ಟ್ರೀಯ ಧ್ವಜ ದತ್ತು ದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 1947 ಜುಲೈ 22ರಂದು ಸಂವಿಧಾನ ಸಭೆಯು ತ್ರಿವರ್ಣ ಧ್ವಜವನ್ನು ಅಂಗೀಕರಿಸಿ ದೇಶದ ಏಕತೆ ಭಾವೈಕ್ಯತೆಯನ್ನು ಮೂಡಿಸುವ ದಿಕ್ಕಿನಲ್ಲಿ ದಿವ್ಯ ಸಾಧನವಾಗಿ ರಾಷ್ಟ್ರಧ್ವಜವನ್ನು ಸದಾ ಕಾಲ ಹಾರಿಸುವ ಮೂಲಕ ರಾಷ್ಟ್ರಕ್ಕೆ ಸ್ವಾಭಿಮಾನ ಆತ್ಮಗೌರವ, ದೇಶದ ಏಕತೆ,ಸಂರಕ್ಷಣೆ,ತ್ಯಾಗ ಬಲಿದಾನಗಳಿಗೆ ಅರ್ಪಿಸುವ ಗೌರವ ಸೂಚಕವಾಗಿದೆ. ತ್ರಿವರ್ಣ ಧ್ವಜದಲ್ಲಿ ಕೇಸರಿ, ಬಿಳಿ, ಹಸಿರು ಹಾಗೂ 24 ಗೆರೆಗಳನ್ನು ಹೊಂದಿರುವ ನೀಲಿ ಚಕ್ರವನ್ನು ಹೊಂದಿರುವ ಭಾರತದ ರಾಷ್ಟ್ರ ಧ್ವಜ ದೇಶದ ಗೌರವದ ಸಂಕೇತ. ತ್ರಿವರ್ಣ ಧ್ವಜವನ್ನು ಶುದ್ಧ ಖಾದಿಯಿಂದ ವಿಶೇಷವಾಗಿ ತಯಾರಿಸಲ್ಪಡುತ್ತದೆ.
ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ರಾಷ್ಟ್ರಧ್ವಜವನ್ನು ತಯಾರಿಸುವ ಘಟಕವಿದ್ದು ಕರ್ನಾಟಕದಲ್ಲಿ ಸುಮಾರು 52 ಕಡೆ ರಾಷ್ಟ್ರಧ್ವಜವನ್ನು ರೂಪಿಸುವ ಕೇಂದ್ರಗಳಿವೆ ಇದು ಭಾರತೀಯರಾದ ನಮಗೆ ಬಹಳ ಹೆಮ್ಮೆ ಆಗಿದೆ. ಧ್ವಜವು ಪುರಾತನ ಸಂಸ್ಕೃತಿ ಮತ್ತು ಪರಂಪರೆಯಿಂದ ಹೆಮ್ಮರವಾಗಿ ರೂಪಿತವಾಗಿರುವ ಮಹಾದ್ಯಯದ ಶಕ್ತಿಯ ಸಂಕೇತ ಸ್ವಾತಂತ್ರ್ಯ ಸಮಾನತೆ ಮತ್ತು ರಾಷ್ಟ್ರದ ಪ್ರತೀಕವಾಗಿರುವ ಧ್ವಜ ಭಾರತೀಯ ಸನಾತನ ಧರ್ಮದಲ್ಲಿ ವಿಶಿಷ್ಟವಾದ ಗೌರವಕ್ಕೆ ಪಾತ್ರವಾಗಿದ್ದು ಧ್ವಜ ರಾಷ್ಟ್ರೀಯತೆ, ರಾಷ್ಟ್ರಭಕ್ತಿ , ತ್ಯಾಗದ ಪ್ರತೀಕವಾಗಿದೆ. ಪಿಂಗಳಿ ವೆಂಕಯ್ಯನವರು ರಾಷ್ಟ್ರಧ್ವಜವನ್ನು ರೂಪಿಸಿದ ಮಹಾನ್ ವ್ಯಕ್ತಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಬಿಕೆ ಆರಾಧ್ಯರವರು ಮಾತನಾಡಿ ತ್ರಿವರ್ಣ ಧ್ವಜದ ಮಹತ್ವದ ಸಾರುವ ಕಾರ್ಯವನ್ನು ರೂಪಿಸಿರುವ ಜೈ ಹಿಂದ್ ಪ್ರತಿಷ್ಠಾನಕ್ಕೆ ವಂದನೆಗಳನ್ನು ಅರ್ಪಿಸಿದರು.ರಾಷ್ಟ್ರಧ್ವಜವು ನಮ್ಮೆಲ್ಲರ ಉಸಿರಾಗಿದೆ. ತ್ರಿವರ್ಣ ಧ್ವಜದ ಹಾರಾಟಕ್ಕಾಗಿ ಲಕ್ಷಾಂತರ ದೇಶಭಕ್ತರು, ಸ್ವಾತಂತ್ರ ಪ್ರೇಮಿಗಳು ಹೋರಾಟವನ್ನು ನಡೆಸಿ ಸ್ವಾತಂತ್ರ ಪಡೆದಿದ್ದಾರೆ. ಸಾವಿರಾರು ಜನ ತ್ಯಾಗ ಬಲಿದಾನವನ್ನು ಮಾಡಿದ್ದಾರೆ. ರಾಷ್ಟ್ರಧ್ವಜವು ಪ್ರತಿಯೊಬ್ಬರಲ್ಲೂ ಗೌರವವನ್ನು ದೇಶಭಕ್ತಿಯನ್ನು ಹೆಚ್ಚಿಸುತ್ತದೆ. ರಾಷ್ಟ್ರಧ್ವಜ ಹಿಡಿದಾಗ ದೇಹ ರೋಮಾಂಚನಗೊಳ್ಳುತ್ತದೆ. ಸೈನಿಕರು ರಾಷ್ಟ್ರಧ್ವಜದ ಸಂರಕ್ಷಣೆಗಾಗಿ ಸದಾ ಕಾಲ ತ್ಯಾಗ ಬಲಿದಾನಗಳನ್ನು ಲೆಕ್ಕಿಸದೆ ಸೇವೆ ಸಲ್ಲಿಸುತ್ತಾರೆ. ಅವರೆಲ್ಲರಿಗೂ ನಮ್ಮೆಲ್ಲರ ವಂದನೆಗಳನ್ನು ಅರ್ಪಿಸೋಣ ಎಂದರು.
ಕಾರ್ಯಕ್ರಮದಲ್ಲಿ ರಂಗ ಶೆಟ್ಟಿ, ಸಂಜಯ್,ಮಹೇಶ್, ಉದಯ್, ಜೈಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ಶ್ರಾವ್ಯ ಋಗ್ವೇದಿ ಇದ್ದರು.




