ಮೂಡಿಗೆರೆ: ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತ ತಾರಕಕ್ಕೇರಿದ್ದು, ದಶಕಗಳಿಂದ ಪಕ್ಷಕ್ಕಾಗಿ ಶ್ರಮಿಸಿದ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದ ತಳಮಟ್ಟದಿಂದ ದುಡಿದ ಹಿರಿಯ ಮುಖಂಡರನ್ನು ಏಕಾಏಕಿ ಹುದ್ದೆಗಳಿಂದ ಕಿತ್ತೊಗೆಯುತ್ತಿರುವುದು ಕಾರ್ಯಕರ್ತರ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಗ್ಯಾರಂಟಿ ಅಧ್ಯಕ್ಷ ಸ್ಥಾನದಿಂದ ಜಯರಾಮ್ ಗೌಡರ ವಜಾಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, “ಮತದಾನದ ಆರಂಭದ ದಿನಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲೇ ಗುರುತಿಸಿಕೊಂಡಿರುವ ಜಯರಾಮ್ ಗೌಡರು ಹಾಗೂ ಅವರ ತಾಯಿಯ ಕಾಲದಿಂದಲೂ ಪಕ್ಷಕ್ಕಾಗಿ ಪ್ರಾಣ ಪಣಕ್ಕಿಟ್ಟು ದುಡಿದ ಇಂತಹ ಹಿರಿಯ ನಾಯಕರನ್ನು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಸ್ಥಾನದಿಂದ ಏಕಾಏಕಿ ಯಾವುದೇ ಮುನ್ಸೂಚನೆ ಇಲ್ಲದೆ ಕಿತ್ತೊಗೆದಿರುವುದು ತೀವ್ರ ಬೇಸರ ತಂದಿದೆ,” ಎಂದರು. “ಇಂತಹ ಹಿರಿಯ ನಾಯಕರಿಗೆ ಗೌರವಯುತವಾಗಿ ಪಕ್ಷದ ನಿರ್ಧಾರವನ್ನು ತಿಳಿಸಿ, ರಾಜೀನಾಮೆ ನೀಡಲು ಕೋರಿದ್ದರೆ ಅವರೇ ಗೌರವದಿಂದ ನಿರ್ಗಮಿಸುತ್ತಿದ್ದರು. ಆದರೆ, ಬೇಕಾಬಿಟ್ಟಿಯಾಗಿ ಇವರನ್ನು ತೆಗೆದುಹಾಕಿ ಬೇರೆಯವರನ್ನು ನೇಮಕ ಮಾಡಿರುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ನೋವುಂಟು ಮಾಡಿದೆ,” ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷದ ಬೆಳವಣಿಗೆಗೆ ರಕ್ತ ಮಾಂಸ ಸವೆಸಿದ ಹಿರಿಯ ನಾಯಕರನ್ನು ’ಸೆಟ್ ದೋಸೆ’, ’ವಯಸ್ಸಾಗಿದೆ’, ’ಅವರಿಂದ ವೋಟ್ ಬರಲ್ಲ’ ಎಂದು ಹೀಯಾಳಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ಹಿರಿಯರಿಗೆ ನೀಡುತ್ತಿರುವ ಇಂತಹ ಅಪಮಾನಗಳು ಪಕ್ಷದ ಸಂಸ್ಕೃತಿಗೆ ತಕ್ಕುದಲ್ಲ ಎಂದು ಸ್ಥಳೀಯ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ. ಇತ್ತ ಹಾಲಿ ಶಾಸಕಿ ನಯನ ಮೋಟಮ್ಮ ಅವರ ವಿರುದ್ಧವೂ ಗಂಭೀರ ಆರೋಪಗಳು ಕೇಳಿಬಂದಿದ್ದು, ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಹದಗೆಟ್ಟಿದೆ ಎಂಬ ಆತಂಕ ವ್ಯಕ್ತವಾಗಿದೆ. ನಯನ ಮೋಟಮ್ಮ ಅವರು ಶಾಸಕರಾದ ನಂತರ ಪಕ್ಷದ ಕಚೇರಿಯಲ್ಲಿ ಒಂದೇ ಒಂದು ಅಧಿಕೃತ ಸಭೆ ನಡೆದಿಲ್ಲ. ಅಧಿಕೃತ ಪದಾಧಿಕಾರಿಗಳನ್ನೇ ದೂರ ಇಡುವುದು ಮತ್ತು ಶಾಸಕರೇ ಮತ್ತೊಂದು ಕಡೆ ಪ್ರತ್ಯೇಕ ಸಭೆ ನಡೆಸುವುದು ಪಕ್ಷದಲ್ಲಿ ಅಧೋಗತಿಯನ್ನು ಸೃಷ್ಟಿಸಿದ್ದ್ದು, ಈ ರೀತಿಯ ಗುಂಪುಗಾರಿಕೆ ಮತ್ತು ಹಿರಿಯ ನಾಯಕರ ಕಡೆಗಣನೆ ಮುಂಬರುವ ದಿನಗಳಲ್ಲಿ ಮೂಡಿಗೆರೆ ಕಾಂಗ್ರೆಸ್ಗೆ ಭಾರಿ ಹಿನ್ನಡೆಯನ್ನು ತರಲಿದೆ ಎಂದು ಹಿರಿಯ ಕಾಂಗ್ರೆಸ್ಸಿಗರು ಕಳವಳ ವ್ಯಕ್ತಪಡಿಸಿದ್ದಾರೆ. “ಶಾಸಕರು ತಕ್ಷಣವೇ ತಮ್ಮ ವರ್ಚಸ್ಸು ಮತ್ತು ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು, ಇಲ್ಲದಿದ್ದರೆ ಇದು ಪಕ್ಷದ ಭವಿಷ್ಯದ ಬೆಳವಣಿಗೆಗೆ ಮಾರಕವಾಗಲಿದೆ,” ಎಂದು ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ನೇರ ಎಚ್ಚರಿಕೆ ನೀಡಿದ್ದಾರೆ.
