ತಿರುಪತಿ: ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಅದನ್ನು ಕಣ್ಣುಮುಚ್ಚಿ ನಂಬಿದರೆ ಅಪಾಯ ಎದುರಾಗಬಹುದು ಎಂಬುದಕ್ಕೆ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಈ ಘಟನೆ ಸಾಕ್ಷಿಯಾಗಿದೆ. ಗೂಗಲ್ ಮ್ಯಾಪ್ ತೋರಿಸಿದ ಹಳೆಯ ಮಾರ್ಗವನ್ನು ನಂಬಿ ವೆಂಕಟಗಿರಿಯಿಂದ ದಕ್ಕಿಲಿ ಕಡೆಗೆ ಪ್ರಯಾಣಿಸುತ್ತಿದ್ದ ಕಾರೊಂದು, ಎರ್ಪೇಡು–ಪೆಂಚಲಕೋಣ ರಾಷ್ಟ್ರೀಯ ಹೆದ್ದಾರಿಯ ಲಿಂಗಸಮುದ್ರಂ ಸಮೀಪ ಹೊಸ ಸೇತುವೆ ನಿರ್ಮಾಣಕ್ಕಾಗಿ ಅಗೆದಿದ್ದ ಬೃಹತ್ ಹೊಂಡಕ್ಕೆ ಬಿದ್ದು ಅಪಘಾತಕ್ಕೀಡಾಗಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಹಳೆಯ ರಸ್ತೆಯನ್ನು ಮುಚ್ಚಿ ವಾಹನಗಳ ಸಂಚಾರವನ್ನು ಪರ್ಯಾಯ ಮಾರ್ಗಕ್ಕೆ ತಿರುಗಿಸಲಾಗಿದ್ದರೂ, ಗೂಗಲ್ ಮ್ಯಾಪ್ ಇನ್ನೂ ಹಳೆಯ ಮಾರ್ಗವನ್ನೇ ತೋರಿಸಿದ್ದರಿಂದ ಚಾಲಕ ಅದೇ ದಾರಿಯಲ್ಲಿ ಸಾಗಿದ್ದು, ಮುಂಭಾಗದ ರಸ್ತೆಯ ಸ್ಥಿತಿಯನ್ನು ಗಮನಿಸದೇ ಕಾರು ನೇರವಾಗಿ ಆಳವಾದ ಹೊಂಡಕ್ಕೆ ಬಿದ್ದಿದೆ. ಅಪಘಾತದ ಭಾರಿ ಸದ್ದು ಕೇಳಿ ಸ್ಥಳೀಯರು ಧಾವಿಸಿ ಚಾಲಕನನ್ನು ರಕ್ಷಿಸಿ ಪ್ರಥಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಅದೃಷ್ಟವಶಾತ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾರು ತೀವ್ರವಾಗಿ ಜಖಂಗೊಂಡಿದೆ. ಈ ಅಪಘಾತಕ್ಕೆ ಕೇವಲ ಗೂಗಲ್ ಮ್ಯಾಪ್ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ರಸ್ತೆ ತಿರುವಿನ ಕುರಿತು ಸಮರ್ಪಕ ಸೂಚನಾ ಫಲಕಗಳು, ರಾತ್ರಿ ವೇಳೆ ಕಾಣುವ ರಿಫ್ಲೆಕ್ಟರ್ಗಳು ಹಾಗೂ ತಡೆಗೋಡೆಗಳನ್ನು ಅಳವಡಿಸದಿರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಸುರಕ್ಷತಾ ವ್ಯವಸ್ಥೆಗಳಿದ್ದರೆ ಈ ಅಪಘಾತವನ್ನು ತಪ್ಪಿಸಬಹುದಾಗಿತ್ತು ಎಂದು ಸಾರ್ವಜನಿಕರು ಹೇಳಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ತಕ್ಷಣ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
