
ಬೆಂಗಳೂರು: ರಾಜ್ಯ ಸರ್ಕಾರದ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಮುಂದುವರಿದಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅರಣ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಗೃಹ ಇಲಾಖೆಗಳಲ್ಲಿ ವ್ಯಾಪಕ ಮಟ್ಟದ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹೊರಡಿಸಿರುವ ಆದೇಶದಂತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 9 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು (ಡಿಎಚ್ಒ), ಒಬ್ಬ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಮೂವರು ಜಿಲ್ಲಾ ಸರ್ಜನ್ಗಳು, 8 ಉಪನಿರ್ದೇಶಕರು, 8 ಪ್ರಾಂಶುಪಾಲರು, 42 ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು ಹಾಗೂ 21 ತಾಲೂಕು ಆರೋಗ್ಯಾಧಿಕಾರಿಗಳು (THO) ಸೇರಿದಂತೆ 90ಕ್ಕೂ ಹೆಚ್ಚು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಇದೇ ವೇಳೆ ಅರಣ್ಯ ಇಲಾಖೆಯಲ್ಲಿ 40 ವಲಯ ಅರಣ್ಯಾಧಿಕಾರಿಗಳನ್ನು (RFO) ವಿವಿಧ ಜಿಲ್ಲೆಗಳಿಗೆ ವರ್ಗಾವಣೆಗೊಳಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ವರ್ಗಾವಣೆಗೊಂಡಿದ್ದ ಇಬ್ಬರು ಐಪಿಎಸ್ ಅಧಿಕಾರಿಗಳಿಗೂ ಸ್ಥಳ ನಿಯುಕ್ತಿ ನೀಡಲಾಗಿದ್ದು, ನಿಶಾ ಜೇಮ್ಸ್ ಅವರನ್ನು ಗುಪ್ತಚರ ಇಲಾಖೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹಾಗೂ ಮಾನೆ ಸ್ವಪ್ನಿಲ್ ತುಕಾರಾಮ್ ಅವರನ್ನು ಕಲಬುರಗಿ ಇಂಟೆಲಿಜೆನ್ಸ್ ಎಸ್ಪಿಯಾಗಿ ನೇಮಕ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಾಗಿದ್ದ ದಿವ್ಯಾ ಪ್ರಭು ಜಿ.ಆರ್.ಜೆ. ಅವರನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (KREDL) ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾಯಿಸಲಾಗಿದ್ದು, ಅವರು ಗ್ರಾಮೀಣಾಭಿವೃದ್ಧಿ ಆಯುಕ್ತರ ಹೆಚ್ಚುವರಿ ಪ್ರಭಾರವನ್ನೂ ಮುಂದುವರಿಸಲಿದ್ದಾರೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೆ.ಪಿ. ರುದ್ರಪ್ಪಯ್ಯ ಅವರನ್ನು ವರ್ಗಾವಣೆ ಮಾಡಿ, ತೆರವಾಗಿದ್ದ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಸರ್ಕಾರದ ಈ ವ್ಯಾಪಕ ವರ್ಗಾವಣೆ ಆದೇಶದಿಂದ ಆರೋಗ್ಯ, ಅರಣ್ಯ, ಗೃಹ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಆಡಳಿತದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಿವೆ.




