
ಕಾರ್ಕಳ : ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ.) ಕರ್ನಾಟಕ ಇದರ 5ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವು ವಿಜೇತ ವಿಶೇಷ ಶಾಲೆಯಲ್ಲಿ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮವನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕರಕರಿ ಫ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷ ವಿತಿನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಅವಿನಾಶ್ ಶೆಟ್ಟಿ, ಹಿರಿಯ ಬಸ್ ಚಾಲಕ ಕೃಷ್ಣ ಕುಮಾರ್ ಭಟ್, ಹಿರಿಯ ಬಸ್ ನಿರ್ವಾಹಕ ಜಯಪ್ರಕಾಶ್ ಶೆಟ್ಟಿ ಹಾಗೂ ಸಮಾಜ ಸೇವಕಿ ನೀತಾ ಪ್ರಭು ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಕರಕರಿ ಫ್ರೆಂಡ್ಸ್ ಸೇವಾ ಬಳಗದ ಸೇವಾ ಕಾರ್ಯಕ್ರಮದ ಅಂಗವಾಗಿ ವಿಜೇತ ವಿಶೇಷ ಶಾಲೆಗೆ ಅವಶ್ಯಕವಾಗಿದ್ದ ಪಂಪ್ಸೆಟ್ ಅನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬೈಲೂರು ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಅಮ್ಮನ ನೆರವು ಟ್ರಸ್ಟ್ನ ಸ್ಥಾಪಕ ಅವಿನಾಶ್ ಜಿ. ಶೆಟ್ಟಿ, ಕರಕರಿ ಫ್ರೆಂಡ್ಸ್ನ ಮಾಜಿ ಅಧ್ಯಕ್ಷರಾದ ಸದಾನಂದ್ ಸಾಲ್ಯಾನ್ ಹಾಗೂ ಸಂತೋಷ್ ಅಮೀನ್, ವಿಜೇತ ವಿಶೇಷ ಶಾಲೆಯ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಸೇರಿದಂತೆ ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ.) ಕರ್ನಾಟಕದ ಪದಾಧಿಕಾರಿಗಳು, ವಿಜೇತ ವಿಶೇಷ ಶಾಲೆಯ ಸಿಬ್ಬಂದಿ ವರ್ಗ, ಮಕ್ಕಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಶ್ರೀಕಾಂತ್ ಪ್ರಭು ಪಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದ್ದು, ಪ್ರಕಾಶ್ ನಾಯ್ಕ್ ಸ್ವಾಗತಿಸಿದರು, ಆನಂದ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ಸಣ್ಣು ಶೇಖರ್ ವಂದಿಸಿದರು.




