
ರಾಮನಗರ: ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಗ್ರಾಮದ ಸಮೀಪದ ಕಾವೇರಿ ಕ್ರಷರ್ ಕಲ್ಲು ಕ್ವಾರಿಯಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ದುರಂತದಲ್ಲಿ ಬೃಹತ್ ಬಂಡೆ ಕುಸಿದು 7 ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗ್ಗೆ ಸುಮಾರು 5 ಗಂಟೆ ವೇಳೆಗೆ ಸುಮಾರು 40 ಅಡಿ ಎತ್ತರದಿಂದ ಬೃಹತ್ ಬಂಡೆ ಕುಸಿದು ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ. ಘಟನೆ ವೇಳೆ ಕೆಳಗಿನ ಕ್ವಾರಿಯಲ್ಲಿ ಒಟ್ಟು 16 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ವಲಯ ಐಜಿಪಿ ಎಸ್. ಗಿರೀಶ್ ತಿಳಿಸಿದ್ದಾರೆ. ಮೃತರನ್ನು ರಾಮು (46), ರಾಜಪಾಲ್ ಸಿಂಗ್ (35), ಸತ್ಯನಾರಾಯಣ ಸಿಂಗ್ (31), ರಾಮವತಾರ್ ಸಿಂಗ್ (31), ರಾಜೇಂದ್ರ ಪ್ರಸಾದ್, ನೂಹರ್ ಸಿಂಗ್ ಹಾಗೂ ಭುವನೇಶ್ವರ ಸಿಂಗ್ ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಗುಲಾಬ್ ಸಿಂಗ್ (27), ರಾಜ್ ಪಾಲ್ (30), ಚೋಟು (24), ನೋಹರ್ ಸಿಂಗ್ (21) ಮತ್ತು ಆನಂದ್ (30) ಅವರನ್ನು ಮೈಸೂರು ರಸ್ತೆಯ ಆರ್.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಬಂಡೆ ಬಿದ್ದ ರಭಸಕ್ಕೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿದ್ದು, ಮೂರು ಟ್ರ್ಯಾಕ್ಟರ್ಗಳು ಸಂಪೂರ್ಣ ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ, ಕ್ವಾರಿಯಲ್ಲಿ ಸ್ಫೋಟಕ್ಕೆ ಅನುಮತಿ ಪಡೆಯಲಾಗಿತ್ತು, ಆದರೆ ದುರಂತಕ್ಕೆ ನಿಖರ ಕಾರಣ ಸ್ಥಳ ಪರಿಶೀಲನೆಯ ಬಳಿಕವೇ ತಿಳಿಯಲಿದೆ ಎಂದು ಹೇಳಿದ್ದಾರೆ. ಹಿಟಾಚಿ ಆಪರೇಟರ್ ಒಬ್ಬರು, ತಾವು ಕೆಲಸ ಮಾಡುತ್ತಿದ್ದ ಸ್ಥಳದಿಂದ ಕೇವಲ 10 ಅಡಿ ದೂರದಲ್ಲಿ ಈ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಘಟನೆ ಸಂಬಂಧ ತಾವರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಶಾಸಕ ಎಸ್.ಟಿ. ಸೋಮಶೇಖರ್, ಈ ಹಿಂದೆಯೇ ಕ್ವಾರಿಗಳ ಸುರಕ್ಷತೆ ಬಗ್ಗೆ ಎಚ್ಚರಿಕೆ ನೀಡಿದ್ದೆ ಎಂದು ಹೇಳಿ, ಸ್ಥಳೀಯ ಪೊಲೀಸರು, ಅರಣ್ಯ ಇಲಾಖೆ ಹಾಗೂ ಘಟನೆಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಜೊತೆಗೆ ಕಲ್ಲು ಕ್ವಾರಿಗಳಲ್ಲಿ ಕಾರ್ಮಿಕರ ಸುರಕ್ಷತೆ ಖಚಿತಪಡಿಸುವುದು ಮಾಲೀಕರ ಕರ್ತವ್ಯವಾಗಿದ್ದು, ನಿಯಮ ಉಲ್ಲಂಘಿಸುವ ಕ್ವಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.




