
ಬೆಂಗಳೂರು: ರಾಜ್ಯ ಸರ್ಕಾರ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಸರ್ಕಾರಕ್ಕೆ ಹಿನ್ನಡೆಯಾಗಿದೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರ ಶಿಫಾರಸು ಮೇರೆಗೆ ಕಲಬುರಗಿ ಜಿಲ್ಲೆಯ ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣ, ಕೋಮು ಗಲಭೆ ಪ್ರಕರಣ ಸೇರಿದಂತೆ ಒಟ್ಟು 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು 2026ರ ಮೇ 27ರಂದು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ, ಮುಖ್ಯ ನ್ಯಾಯಮೂರ್ತಿ ವಿಬು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಈ ಆದೇಶಕ್ಕೆ ಮಧ್ಯಂತರ ತಡೆ ನೀಡಿ, ಗೃಹ ಇಲಾಖೆ ಹಾಗೂ ಅಭಿಯೋಜನೆ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳೊಳಗೆ ಉತ್ತರ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಇದೇ ವೇಳೆ ಯು.ಟಿ. ಖಾದರ್ ಅವರಿಗೆ ನೋಟಿಸ್ ನೀಡುವಂತೆ ಕೇಳಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದ ಗಿರೀಶ್ ಭಾರದ್ವಾಜ್ ಪರ ವಕೀಲ ವೆಂಕಟೇಶ್ ಪಿ. ದಳವಾಯಿ, ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಸೆಕ್ಷನ್ 321ರಡಿ ಸರ್ಕಾರಿ ಅಭಿಯೋಜಕರಿಗೆ ಇರುವ ಸ್ವತಂತ್ರ ಅಧಿಕಾರವನ್ನು ಸರ್ಕಾರ ಕಸಿದುಕೊಂಡಿದ್ದು, ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರ ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ಕೈಗೊಂಡಿಲ್ಲ ಎಂದು ವಾದಿಸಿದರು. ಈ ವೇಳೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವು ಇದೇ ರೀತಿಯ ಅಧಿಸೂಚನೆಯನ್ನು ರದ್ದುಗೊಳಿಸಿದ್ದ ಹೈಕೋರ್ಟ್ನ ಹಿಂದಿನ ತೀರ್ಪಿಗೆ ಪ್ರಾಥಮಿಕವಾಗಿ ವಿರುದ್ಧವಾಗಿದೆ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.
ಇತ್ತ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನ್ಯಾಯಾಲಯದ ಆದೇಶದ ಪ್ರತಿ ಬಂದ ಬಳಿಕ ಸರ್ಕಾರ ಚರ್ಚೆ ನಡೆಸಲಿದೆ. ಹಿಂಪಡೆಯಲಾದ ಪ್ರಕರಣಗಳಲ್ಲಿ ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳೂ ಸೇರಿವೆ. ಸರ್ಕಾರ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಸಂಪುಟವು ಕಾನೂನು ಚೌಕಟ್ಟಿನಲ್ಲಿಯೇ ಈ ನಿರ್ಧಾರ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.



