
ಬೆಂಗಳೂರು: ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಯೋಜನೆ ಪೋಷಕರಿಗೆ ಹೊರೆಯಾಗಿ ಪರಿಣಮಿಸಿದೆ. ಶಾಲಾ ಶಿಕ್ಷಣ ಇಲಾಖೆ ಸಮವಸ್ತ್ರದ ಬಟ್ಟೆಯನ್ನು ಮಾತ್ರ ಉಚಿತವಾಗಿ ನೀಡುತ್ತಿದ್ದು, ಹೊಲಿಗೆ ವೆಚ್ಚವನ್ನು ಪೋಷಕರೇ ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಜೊತೆ ಸಮವಸ್ತ್ರ ಹೊಲಿಸಲು ₹1,300ರಿಂದ ₹1,500ರವರೆಗೆ ವೆಚ್ಚವಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
2026-27ನೇ ಶೈಕ್ಷಣಿಕ ಸಾಲಿಗೆ ಇಲಾಖೆ ಸಮವಸ್ತ್ರದ ಬಟ್ಟೆಯನ್ನು ವಿತರಿಸಿದ್ದು, ಅದನ್ನು ಹೊಲಿಸುವ ಜವಾಬ್ದಾರಿಯನ್ನು ಪೋಷಕರ ಮೇಲೇ ಬಿಟ್ಟಿದೆ. ಹೊಲಿಗೆ ವೆಚ್ಚ ಬಟ್ಟೆಯ ಮೌಲ್ಯಕ್ಕಿಂತಲೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ಪೋಷಕರು ಸರ್ಕಾರದ ಉಚಿತ ಬಟ್ಟೆ ಬೇಡ, ಅದರ ಬದಲಿಗೆ ಸಿದ್ಧಪಡಿಸಿದ ಸಮವಸ್ತ್ರವನ್ನೇ ನೀಡಲಿ ಎಂದು ಒತ್ತಾಯಿಸುತ್ತಿದ್ದಾರೆ.
ಪೋಷಕರ ಪ್ರಕಾರ, ಒಂದು ಜೊತೆ ಸಮವಸ್ತ್ರ ಹೊಲಿಸಲು ಖರ್ಚಾಗುವ ಹಣದಲ್ಲೇ ಮಾರುಕಟ್ಟೆಯಲ್ಲಿ ಎರಡು ಜೊತೆ ರೆಡಿಮೇಡ್ ಸಮವಸ್ತ್ರಗಳನ್ನು ಖರೀದಿಸಬಹುದು. ಕಳೆದ ಎರಡು ವರ್ಷಗಳಿಂದಲೂ ಇದೇ ಸಮಸ್ಯೆ ಮುಂದುವರಿದಿದ್ದು, ಸರ್ಕಾರ ಬಟ್ಟೆ ನೀಡುವ ಬದಲು ಸಿದ್ಧ ಸಮವಸ್ತ್ರ ವಿತರಿಸಬೇಕು ಎಂಬ ಆಗ್ರಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಪ್ರಸ್ತುತ ಗಂಡು ಮಕ್ಕಳಿಗೆ ಲೈಟ್ ಬ್ಲೂ ಶರ್ಟ್ ಹಾಗೂ ನೇವಿ ಬ್ಲೂ ನಿಕ್ಕರ್ಗೆ ಬೇಕಾದ ಬಟ್ಟೆ, ಹೆಣ್ಣು ಮಕ್ಕಳಿಗೆ ಹಸಿರು, ಕೆಂಪು, ಬಿಳಿ, ಕಪ್ಪು ಮತ್ತು ಹಳದಿ ಬಣ್ಣಗಳ ಚೆಕ್ಸ್ ವಿನ್ಯಾಸದ ಚೂಡಿದಾರ್ ಟಾಪ್, ಹಸಿರು ಬಾಟಮ್, ದುಪ್ಪಟ್ಟಾ ಹಾಗೂ ನೇವಿ ಬ್ಲೂ ಸ್ಕರ್ಟ್ಗೆ ಬೇಕಾದ ಬಟ್ಟೆ ವಿತರಿಸಲಾಗುತ್ತಿದೆ. ಆದರೆ ಹೊಲಿಗೆ ವೆಚ್ಚ ಭರಿಸಲು ಸಾಧ್ಯವಾಗದ ಕಾರಣ ಹಲವು ಪೋಷಕರು ಬಟ್ಟೆ ಹೊಲಿಸದೇ, ಮಕ್ಕಳನ್ನು ಹಳೆಯ ಸಮವಸ್ತ್ರದಲ್ಲೇ ಶಾಲೆಗೆ ಕಳುಹಿಸುತ್ತಿದ್ದಾರೆ.
ಇನ್ನೊಂದು ಸಮಸ್ಯೆಯೆಂದರೆ, 7ನೇ ತರಗತಿಯ ಗಂಡು ಮಕ್ಕಳಿಗೆ ಇಲಾಖೆ ಇನ್ನೂ ನಿಕ್ಕರ್ (ಚಡ್ಡಿ) ಸಮವಸ್ತ್ರವನ್ನೇ ನೀಡುತ್ತಿದೆ. ಆದರೆ ಆ ವಯಸ್ಸಿನ ಹೆಚ್ಚಿನ ವಿದ್ಯಾರ್ಥಿಗಳು ಪ್ಯಾಂಟ್ ಧರಿಸಲು ಬಯಸುತ್ತಿರುವುದರಿಂದ, ಪೋಷಕರು ಸರ್ಕಾರ ನೀಡಿದ ಬಟ್ಟೆಯನ್ನು ಬಳಸದೆ ಸ್ವಂತ ಹಣದಲ್ಲಿ ಪ್ಯಾಂಟ್ ಖರೀದಿಸಿ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸಂತೋಷ್ ಕುಮಾರ್, ಪೋಷಕರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ಕೂಡ ಹೊಲಿಗೆ ವೆಚ್ಚ ಹಾಗೂ ಪೋಷಕರ ಅಸಮಾಧಾನದ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ.





