
ಬುತ್ತಿ ತುತ್ತು
ಕಳಚಿಕೊಳ್ಳಬೇಕು!
ಜೀವನ ಯಾತ್ರೆಯಲ್ಲಿ ನಾವು ಅಲ್ಲಲ್ಲಿ ಬೆಸೆದುಕೊಂಡ ಸ್ನೇಹದ ಸರಪಳಿಯ ಕೊಂಡಿಯೊಂದನ್ನು ಕಳಚಲೇಬೇಕಾದ ಸನ್ನಿವೇಶ ಎದಿರಾಗಿ ಬಿಡುತ್ತದೆ. ನನ್ನ ಸ್ನೇಹ ಬಳಗ ದೊಡ್ಡದಿದೆ. ಹೆಚ್ಚಿನ ಗೆಳೆತನವನ್ನು ನಾನು ಬಯಸಿ ಬೆಸೆದುಕೊಂಡಿದ್ದಲ್ಲ. ಪತ್ರಿಕೆಯ ಪರಿಚಯ, ಒಂದು ನಗು ಸ್ನೇಹವನ್ನು ಹುಟ್ಟು ಹಾಕುತ್ತದೆ. ಸುದ್ದಿ ಮನೆಯಲ್ಲಿ ಕುಳಿತ ನಮಗೆ ಗೆಳೆಯರ ಬಳಗ ಎಷ್ಟಿದ್ದರೂ ಸಾಲದು. ಆದರೆ ಆತ್ಮೀಯ ವಲಯ ಇದೆಯಲ್ಲ, ಅದು ನಾನೇ ಅಳೆದೂ ತೂಗಿ ಸೃಷ್ಠಿಸಿಕೊಂಡ ಬಳಗ. ಈ ಬಳಗದಲ್ಲಿ ಬೆರಳೆಣಿಕೆಯ ಮಂದಿ ಮಾತ್ರ ಇದ್ದಾರೆ. ರಾಜಕಾರಣಿಗಳು, ಪೊಲೀಸರು, ವಕೀಲರು, ಪತ್ರಕರ್ತರು, ಸಮಾಜ ಸೇವಕರು ಹೀಗೆ ನಾನಾ ವಲಯದಲ್ಲಿ ತೊಡಗಿಸಿಕೊಂಡವರ ಗೆಳೆತನದ ಕುರಿತು ನಾನು ಮಾತಾಡ ಹೊರಟಿದ್ದು. ಒಂದು ಉದಾಹರಣೆ ಹೇಳ್ತೀನಿ ಕೇಳಿ ನೀವು ಒಂದು ಸಂಘಟನೆಯ ನಾಯಕ ಸ್ಥಾನದಲ್ಲಿದ್ದೀರಿ. ಸಂಘಟನೆಯ ಹೊರತಾಗಿಯೂ ನಿಮಗೊಂದು ಗೆಳೆಯರ ಗುಂಪಿದೆ. ಆ ಗುಂಪಿನ ಗೆಳೆಯನೊಬ್ಬ ನೀವು ಸಂಘಟನೆಯ ಕಾರ್ಯಕರ್ತರೊಂದಿಗಿರುವಾಗ ಏನಲೇ… ಅಂತ ನಿಮ್ಮನ್ನು ಕೂಗಿ ಬಿಟ್ಟರೆ, ಸುತ್ತಲಿನ ಜನರ ಮುಂದೆ ನಿಮ್ಮ ವ್ಯಕ್ತಿತ್ವ ಕುಸಿದು ಬಿಡುತ್ತದೆ. ನಿಮ್ಮನ್ನು ಹಾಗೆ ಕೂಗಿದವನು ಆತ್ಮೀಯ ಗೆಳೆಯ, ಜಿಗರಿ ದೋಸ್ತ್. ನೀವಿಬ್ಬರೇ ಇದ್ದಾಗ ಹೀಗೆ ಏನಲೋ… ಬಾರಲೋ.. ಅಂತ ಸಾವಿರ ಸಲ ಕರೆದುಕೊಂಡಿದ್ದಿದೆ. ಆದರೆ ಈ ಕ್ಷಣಕ್ಕೆ ಅವನು ಹಾಗೆ ಕರೆದಿದ್ದು ನಿಮಗೆ ಮುಜುಗರ ತಂದಿದೆ! ಅಫ್ಕೋರ್ಸ್ ಅವನಿಗಾದರು ನಿಮ್ಮನ್ನು ಎಲ್ಲರ ಮುಂದೆ ಅವಮಾನಿಸುವ ಉದ್ದೇಶವಿರಲಿಲ್ಲ. ಆತನದು ಸಹಜವಾದ ಆತ್ಮೀಯತೆ ಆದರೆ ಕಾಮನ್ ಸೆನ್ಸ್ನ ಕೊರತೆ! ಇನ್ನೊಂದು ವರ್ಗದ ಗೆಳೆಯ/ಗೆಳತಿಯರಿರುತ್ತಾರೆ. ಒಂದು ಯಾವುದೋ ಭಾವುಕ ಗಳಿಗೆ, ಯಾರಲ್ಲೂ ಹೇಳಿಕೊಳ್ಳಲಾಗದ ಸಂಗತಿಯೊಂದನ್ನು ನಿಮ್ಮ ಆತ್ಮೀಯ ಎಂದುಕೊಂಡು ಮನಸ್ಸು ಬಿಚ್ಚಿ ಮಾತಾಡಿ ಬಿಟ್ಟಿರುತ್ತೀರಿ. ಆದರೆ ಕೇಳಿಸಿಕೊಂಡ ಗೆಳತಿ ಅದನ್ನು ನಾಲ್ಕು ಜನರ ಮುಂದೆ ಹೇಳಿ ಬಿಡುತ್ತಾಳೆ! ಕೆಲವು ಸಲ ಹೇಗಾಗಿ ಬಿಡುತ್ತದೆ ಎಂದರೆ ನಮ್ಮದೇ ಗುಂಪಿನ ಒಬ್ಬರಿಗೆ ನಮ್ಮ ವಿಚಾರ ಗೊತ್ತಾಗದಿರಲಿ ಅಂದುಕೊಂಡಿರುತ್ತೇವೆ. ಈ ನಮ್ಮ ಆತ್ಮೀಯ ಅಂಥವರ ಮುಂದೆಯೇ ಹೇಳಿಬಿಟ್ಟಿರುತ್ತಾನೆ! ಇಂತಹ ಸಂಬಂಧಗಳ ಕೊಂಡಿಯನ್ನು ಕಳಚಿಕೊಳ್ಳುವುದು ಅನಿವಾರ್ಯವಾಗಿ ಬಿಡುತ್ತದೆ. ಆದರೆ ಇನ್ನೊಂದು ತರಹದ ಸಂಕಟದಲ್ಲಿ, ಕೆಲವರು ಸಿಕ್ಕಿಬಿದ್ದು ಬಿಡುತ್ತಾರೆ. ಅಲ್ಲಿ ಸಂಬಂಧದ ಕೊಂಡಿ ಕಗ್ಗಂಟಾಗಿ ಬಿಟ್ಟಿರುತ್ತದೆ. ಅದನ್ನು ಬಿಡಿಸಿಕೊಳ್ಳುವುದು ಕಷ್ಟವಾಗಿರುತ್ತದೆ! ಅದು ಎಮೋಶನಲ್ ಬ್ಲಾಕ್ಮೇಲ್! ಎಸ್, ಇಂತಹ ಎಮೋಶನಲ್ ಬ್ಲಾಕ್ಮೇಲ್ಗೆ ಒಳಗಾಗುವುದು ಹೆಣ್ಣುಮಕ್ಕಳು! ಗೆಳತಿಯರೇ, ಒಂದು ಕ್ಷಣ ಯೋಚಿಸಿ ನಿಮ್ಗೆ ಗೊತ್ತಿಲ್ಲದೆ ನೀವು ಯಾರೊಂದಿಗಾದರು ಮಾತಾಡುವಾಗ ನನ್ನ ಅರ್ಥ ಮಾಡ್ಕೊಳ್ಳೋರು ಯಾರು ಇಲ್ಲ, ನಾನು ಒಂಟಿ,.. ಹೀಗೆ ಯಾರೊಂದಿಗಾದರು ಹೇಳಿಕೊಂಡಿದ್ದೀರಾ..? ಹಾಗೆ ಅದನ್ನು ಕೇಳಿಸಿಕೊಂಡವರು ಹೇ ಹಾಗೆ ಅನ್ನಬೇಡ ನಾನಿದೀನಿ ಕಣೇ… ಅಂದು ಬಿಟ್ಟಿರಬೇಕಲ್ವಾ? ಹಾಗಂದ ಅಂತ ಖುಷಿಯಲ್ಲಿ ನಿಮ್ಮ ಎಲ್ಲಾ ಖಾಸಗಿ ವಿಷಯವನ್ನು ತೆರೆದಿಟ್ಟು ಬಿಡಬೇಡಿ.. ಹಾಗಾದಾಗಲೇ ಅದು ಬಿಡಿಸಲಾಗದ ಕಗ್ಗಂಟಾಗಿ ಬಿಡೋದು. ಆ ಬಗ್ಗೆ ಎಚ್ಚರದಿಂದಿರಿ. ಒಂದು ಮಾತು ನೀವು ಕೇಳಿರಬೇಕು, ಕೋಪದಲ್ಲಿ ನಿರ್ಧಾರ ತೆಗೆದುಕೊಳ್ಳಬಾರದು ಅಂತ ಹಾಗೆಯೇ ಭಾವುಕ ಗಳಿಗೆಯಲ್ಲಿ ಮಾತು ಮತ್ತು ಮನಸ್ಸನ್ನು ಜಾಗೃತವಾಗಿಟ್ಟುಕೊಳ್ಳಬೇಕು. ಹಾಗಾದರೆ ನಾವು ಯಾರನ್ನು ನಂಬಲೇ ಬಾರದಾ..? ಅಫ್ಕೋರ್ಸ್, ನಂಬಿ. ಆದರೆ ನಂಬಿಕೆ ನಾಳೆ ಪಶ್ಚಾತ್ತಾಪಕ್ಕೆ ಎಡೆಮಾಡಿಕೊಡಬಾರದು ಅಲ್ವಾ? ನಾವೆಲ್ಲ ಒಂದು ಸತ್ಯವನ್ನು ಅರ್ಥಮಾಡಿಕೊಳ್ಳಬೇಕು. ನಮಗೆ ನಾವು ಅರ್ಥವಾದಷ್ಟು ಈ ಜಗತ್ತಿನಲ್ಲಿ ಇನ್ನಾರಿಗೂ ಅರ್ಥವಾಗಲು ಸಾಧ್ಯವಿಲ್ಲ! ಪ್ರೀತಿ, ಕಾಮ, ಸ್ನೇಹ, ಸಾಹಸ, ಭಾವನಾತ್ಮಕ, ಆಧ್ಯಾತ್ಮ ಹೀಗೆ ಯಾವುದೇ ಅನುಮಾನಗಳನ್ನು ಬಗೆಹರಿಸುವ ಪುಸ್ತಕಗಳಿವೆ. ಅವುಗಳೊಂದಿಗೆ ಬಂಧ ಬೆಸೆದುಕೊಳ್ಳಲಿ. ಆಗ ಸಂತೋಷ ಎಂಬುದು ನಿಮ್ಮ ಮನೆಯ ಜಗುಲಿಯಲ್ಲಿ ಕಾಲು ಮುರಿದುಕೊಂಡು ಕುಳಿತಿರುತ್ತದೆ!
ಸ್ನೇಹಿತರೇ ಈಗ ನೀವು ಕಳಚಿಕೊಳ್ಳುವ ಸಂಬಂಧಗಳ ಬಗ್ಗೆ ಯೋಚಿಸುವ ಮೊದಲು ನೀವೇ ಒಂದು ಕೊಂಡಿಯಾಗಿದ್ದಾಗ ನಿಮ್ಮ ಮಿತ್ರರ ಬಳಿ ನೀವು ಹೇಗೆ ವರ್ತಿಸಬೇಕು ಅಂತ ತೀರ್ಮಾನಿಸುವುದು ಈ ಕ್ಷಣಕ್ಕೆ ಅಗತ್ಯ ಅಂತ ನನ್ನ ಅಭಿಪ್ರಾಯ ಏನಂತೀರಿ…?







